ಅಹಮದಾಬಾದ್: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಭಾರತ ಮತ್ತು ಆಸ್ಟ್ರೇಲಿಯಾ(India vs Australia, Final) ನಡುವಣ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಗಂಟೆಗಳ ಲೆಕ್ಕಾಚಾರದಲ್ಲಿ ಇನ್ನೊಂದೆ ದಿನ ಬಾಕಿ ಉಳಿದಿದೆ. ಭಾನುವಾರ ಮಧ್ಯಾಹ್ನ ಪಂದ್ಯ ಆರಂಭಗೊಳ್ಳಲಿದೆ. ಆದರೆ ಸದ್ಯಕ್ಕಿರುವ ಕುತೂಹಲವೇನೆಂದರೆ ಅಹಮದಾಬಾದ್ನ ಪಿಚ್(Ahmedabad Pich) ಹೇಗೆ ವರ್ತಿಸಲಿದೆ ಎನ್ನುವುದು.
ಆಸ್ಟ್ರೇಲಿಯಾ ವಿರುದ್ಧವೇ ಮೊದಲ ಪಂದ್ಯ…
ಮೊಟೆರಾ ಕ್ರೀಡಾಂಗಣ ನಿರ್ಮಾಣವಾಗಿದ್ದು 1982ರಲ್ಲಿ. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ನಿರ್ಮಾಣಗೊಂಡ ಈ ಸ್ಟೇಡಿಯಂನ ಆಗಿನ ಹೆಸರು ಸರ್ದಾರ್ ಪಟೇಲ್ ಸ್ಟೇಡಿಯಂ. 1984ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಈ ಅಂಗಳದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿತ್ತು. ಆದರೆ ಆ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.
ಇದನ್ನೂ ಓದಿ IND vs AUS: ಭಾರತ-ಆಸೀಸ್ ವಿಶ್ವಕಪ್ ಸಾಧನೆಯ ಅಂಕಿ ಅಂಶ ಹೇಗಿದೆ?
ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿ
ಹಲವು ಐತಿಹಾಸಿಕ ಘಟನೆಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ. ಹಲವು ‘ಪ್ರಥಮ’ಗಳು ಈ ಮೊಟೆರಾ ಮೈದಾನದಲ್ಲಿ ದಾಖಲಾಗಿದೆ. 1987ರಲ್ಲಿ ಇದೇ ಮೈದಾನದಲ್ಲಿ ಭಾರತದ ಸುನೀಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಸಾಧಕನಾಗಿ ಮೂಡಿ ಬಂದಿದ್ದರು. ಏಳು ವರ್ಷದ ನಂತರ ಇದೇ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಕಪಿಲ್ ದೇವ್ ಮಾಡಿದ್ದರು. ಅಂದು 432ನೇ ವಿಕೆಟ್ ಪಡೆದು ಸರ್ ರಿಚರ್ಡ್ ಹ್ಯಾಡ್ಲಿ ದಾಖಲೆಯನ್ನು ಮುರಿದಿದ್ದರು. 2011ರಲ್ಲಿ ಇದೇ ಮೊಟೆರಾ ಅಂಗಳದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 18 ಸಾವಿರ ರನ್ ಬಾರಿಸಿದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದರು.
ಯುವಿ ಬ್ಯಾಟಿಂಗ್ ಸಾಹಸ…
2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಯಾವ ಭಾರತೀಯ ಅಭಿಮಾನಿಯೂ ಮರೆಯಲು ಅಸಾಧ್ಯ. ಆಸ್ಟ್ರೇಲಿಯಾ ವಿರುದ್ಧದ ಆ ಪಂದ್ಯದಲ್ಲಿ ವೀರೋಚಿತವಾಗಿ ಹೋರಾಡಿದ್ದ ಯುವರಾಜ್ ಸಿಂಗ್ ಭಾರತಕ್ಕೆ ಜಯ ತಂದಿತ್ತಿದ್ದರು.
ಇದನ್ನೂ ಓದಿ IND vs AUS: ಗಂಗೂಲಿ ಮಾಡಿದ ಎಡವಟ್ಟನ್ನು ರೋಹಿತ್ ಶರ್ಮಾ ಮಾಡದಿರಲಿ…
ಪುನರ್ ನಿರ್ಮಾಣ
2015ರವರೆಗೆ ಮೊಟೆರಾ ಸರ್ದಾರ್ ಪಟೇಲ್ ಮೈದಾನದಲ್ಲಿ 12 ಟೆಸ್ಟ್, 23 ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ. 2015ರಲ್ಲಿ ಈ ಮೈದಾನವನ್ನು ಸಂಪೂರ್ಣವಾಗಿ ಕೆಡವಲಾಯಿತು. ಬ್ಯಾಟಿಂಗ್ ಟ್ರ್ಯಾಕ್ ಆಗಿದ್ದ ಈ ಪಿಚ್ ಈಗ ಬೌಲಿಂಗ್ ಟ್ರ್ಯಾಕ್ ಆಗಿ ಮಾರ್ಪಟ್ಟಿದೆ. ಇಲ್ಲಿ ಆಡಿದ ಈ ಬಾರಿಯ 4 ವಿಶ್ವಕಪ್ ಪಂದ್ಯಗಳಲ್ಲಿ 286 ರನ್‌ಗಳೇ ಅತಿ ದೊಡ್ಡ ಸ್ಕೋರ್ ಆಗಿದೆ. ಯಾವ ಪಂದ್ಯದಲ್ಲೂ 300ರ ಗಡಿ ದಾಟಲು ಸಾಧ್ಯವಾಗಲಿಲ್ಲ.
315 ರನ್ ಗಳಿಸಿದರೆ ಗೆಲುವು ಖಚಿತ
ಫೈನಲ್ ಪಂದ್ಯಕ್ಕೆ ಹೊಸ ಪಿಚ್ನಲ್ಲಿ ಆಡಿಸಲಾಗುವುದು ಎಂಬ ಮಾತು ಕೂಡ ಕೇಳಿ ಬಂದಿದೆ. ಇದು ಸ್ಪೋ ಬ್ಯಾಟಿಂಗ್ ಪಿಚ್ ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ಇದು ಸಂಪೂರ್ಣ ಬ್ಯಾಟಿಂಗ್ ಪಿಚ್ ಎಂದಿದ್ದಾರೆ. ಆದರೆ ಸ್ಥಳೀಯ ಪಿಚ್ ಕ್ಯುರೇಟರ್ ನೀಡಿದ ಮಾಹಿತಿಯ ಪ್ರಕಾರ, ಇಲ್ಲಿ ಸ್ವಲ್ಪ ದೊಡ್ಡ ಸ್ಕೋರ್ ಕಲೆಹಾಕಬಹುದಾಗಿದೆ. ಆದರೆ ನಿರಂತರವಾಗಿ ಹಾರ್ಡ್ ಹಿಟ್ಟಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 315 ರನ್ ಗಳಿಸಿದರೆ ಗೆಲುವು ಖಚಿತ. ಚೇಸಿಂಗ್ ಸುಲಭವಲ್ಲ ಎಂದು ಹೇಳಿದ್ದಾರೆ. 2023ರ ವಿಶ್ವಕಪ್‌ಗೂ ಮುನ್ನ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದು ಪಂದ್ಯವನ್ನಾಡಿತ್ತು. ಈ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು.