ಮುಂಬಯಿ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ(Team India) ಕೀಪಿಂಗ್ ಹೊಣೆ ಹೊತ್ತು ಯಶಸ್ಸು ಕಂಡಿದ್ದ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರನ್ನು ವಿಕೆಟ್ ಕೀಪಿಂಗ್ ಜವಾಬ್ದಾರಿಯಿಂದ ಕೆಳಗಿಳಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಕ್ರಿಕ್ ಇನ್ಫೋ ವರದಿಯ ಪ್ರಕಾರ ಕೆ.ಎಲ್ ರಾಹುಲ್ ಅವರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ(England Tests) ಟೆಸ್ಟ್ ಸರಣಿಗೆ ಕೇವಲ ಬ್ಯಾಟರ್ ಆಗಿ ಆಯ್ಕೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ತಿಳಿಸಿದೆ. ರಾಹುಲ್ ಅವರನ್ನು ಕೀಪಿಂಗ್ ಹುದ್ದೆಯಿಂದ ಕೆಳಗಿಳಿಸುವ ಕಾರಣಕ್ಕೆ ಅವರಿಗೆ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ನೀಡಿಲ್ಲ ಎನ್ನಲಾಗಿದೆ.
ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಕೀಪಿಂಗ್ ನಡೆಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅವರಿಗೆ ಕೇವಲ ಬ್ಯಾಟಿಂಗ್ ರೋಲ್ ಮಾತ್ರ ನೀಡಲಾಗುತ್ತದೆ ಎನ್ನಲಾಗಿದೆ. ಮಾನಸಿಕ ಒತ್ತಡದಿಂದ ಹೊರಬರಲು ವಿಶ್ರಾಂತಿ ಬೇಕೆಂದು ಕಾರಣ ಹೇಳಿ ದಕ್ಷಿಣ ಆಫ್ರಿಕಾ ಸರಣಿಯಿಂದ ದೂರ ಉಳಿದಿದ್ದ ಇಶಾನ್ ಕಿಶನ್ ಅವರಿಗೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೀಪಿಂಗ್ ಹೊಣೆ ನೀಡಲಾಗುತ್ತದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಇಶಾನ್ಗೆ ಬಿಸಿಸಿಐ ರಣಜಿ ಆಡುವಂತೆ ಕಟ್ಟಪ್ಪಣೆ ಮಾಡಿದೆ ಎನ್ನಲಾಗಿದೆ.
ಕಿಶನ್ ಕ್ರಿಕೆಟ್‌ನಿಂದ ದೂರ ಉಳಿಯಲು ಸುಳ್ಳು ಕಾರಣ ನೀಡಿ ಅಶಿಸ್ತು ತೋರಿದ್ದರಿಂದ ಇದಕ್ಕೆ ಶಿಕ್ಷೆಯಾಗಿ ಅವರನ್ನು ಅಫಘಾನಿಸ್ತಾನ ಸರಣಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿತ್ತು. ಆದರೆ ರಾಹುಲ್ ದ್ರಾವಿಡ್ ಅವರು ಇಶಾನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಇಶಾನ್ ಬೇಡಿಕೆಗೆ ನಾವು ಸ್ಪಂದಿಸಿದ್ದೇವೆ. ಸ್ವಂತ ನಿರ್ಧಾರದಂತೆ ಅವರು ಹೊರಗುಳಿದಿದ್ದಾರೆ. ಯಾವುದೇ ಶಿಸ್ತಿನ ಕ್ರಮವಲ್ಲ ಎಂದಿದ್ದಾರೆ.
ಇದನ್ನೂ ಓದಿ Team India: ಚಳಿಯಲ್ಲಿ ನಡುಗಿದ ಟೀಮ್ ಇಂಡಿಯಾ ಆಟಗಾರರು; ವಿಡಿಯೊ ಹಂಚಿಕೊಂಡ ಬಿಸಿಸಿಐ
ರಾಹುಲ್ ಟಿ20ಯಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 72 ಟಿ20 ಪಂದ್ಯಗಳಲ್ಲಿ 37.75ರ ಸರಾಸರಿಯಲ್ಲಿ 2265 ರನ್ ಗಳಿಸಿದ್ದಾರೆ. ರಾಹುಲ್ ಈಗ ಟಿ20 ಐ ಪಂದ್ಯಗಳಲ್ಲಿ ಆಡಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯವಾಗಿದೆ 2022ರ ನವೆಂಬರ್ನಲ್ಲಿ ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನಾಡಿದ್ದರು.
ಭಾರತ-ಇಂಗ್ಲೆಂಡ್ ಸರಣಿ ಯಾವಾಗ ಆರಂಭ?
ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಒಟ್ಟು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್ಕೋಟ್ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ.
ವೇಳಾಪಟ್ಟಿ
ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್ಕೋಟ್)
ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)