Site icon Vistara News

Virat kohli | ಕೊಹ್ಲಿಗೆ ಯಾವ ರೀತಿ ಮೆಸೇಜ್ ಮಾಡಬೇಕಿತ್ತು? ವಿರಾಟ್‌ ಮಾತಿಗೆ ಗವಾಸ್ಕರ್ ತಿರುಗೇಟು

Virat kohli

ನವದೆಹಲಿ : ವಿರಾಟ್‌ ಕೊಹ್ಲಿಗೆ ಯಾವೆಲ್ಲ ಆಟಗಾರರು ಮೆಸೇಜ್‌ ಮಾಡಬೇಕಿತ್ತಂತೆ? ಯಾವ ರೀತಿಯ ಮೆಸೇಜ್‌ ಕಳುಹಿಸಬೇಕಿತ್ತಂತೆ? ಹೀಗೆಂದು ಟೀಮ್ ಇಂಡಿಯಾದ ಮಾಜಿ ನಾಯಕನಿಗೆ ತಿರುಗೇಟು ಕೊಟ್ಟಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ವಿಶ್ಲೇಷಕ ಸುನೀಲ್‌ ಗವಾಸ್ಕರ್‌. ಈ ಮೂಲಕ ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ ನೀಡಿರುವ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (೬೦) ಅರ್ಧ ಶತಕ ಬಾರಿಸಿದ್ದರು. ಈ ಮೂಲಕ ಫಾರ್ಮ್‌ಗೆ ಮರಳಿ ತಮ್ಮನ್ನು ನಿರಂತರವಾಗಿ ಟೀಕೆ ಮಾಡಿದವರಿಗೆ ಉತ್ತರ ಕೊಟ್ಟಿದ್ದರು. ಅಲ್ಲದೆ, ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಟಿವಿಯಲ್ಲಿ ಕುಳಿತು ಅಭಿಪ್ರಾಯ ಹೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ನೇರವಾಗಿ ಹೇಳಿದರೆ ನನಗೆ ಅನುಕೂಲ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ಅವರು ತಾವು ಟೆಸ್ಟ್‌ ತಂಡದ ನಾಯಕತ್ವವನ್ನು ತ್ಯಜಿಸಿದ ಸಂದರ್ಭದಲ್ಲಿ ಯಾರೂ ನೈತಿಕವಾಗಿ ಬೆಂಬಲಕ್ಕೆ ನಿಂತಿಲ್ಲ. ಕೇವಲ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮಾತ್ರ ಮೆಸೇಜ್ ಮಾಡಿದ್ದರು ಎಂಬದುದಾಗಿ ಹೇಳಿದ್ದರು. ಈ ಮೂಲಕ ಅವರು ತಮ್ಮನ್ನ ಪದೇಪದೆ ಟೀಕೆಗೆ ಒಳಪಡಿಸುವ ಕೆಲವು ಹಿರಿಯ ಆಟಗಾರರಿಗೆ ಉತ್ತರ ಕೊಟ್ಟಿದ್ದರು. ಅದಕ್ಕೀಗ ಗವಾಸ್ಕರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

“ತಮಗೆ ಮೆಸೇಜ್ ಮಾಡದವರ ಹೆಸರನ್ನು ವಿರಾಟ್‌ ಕೊಹ್ಲಿ ತಿಳಿಸಿದರೆ ಅವರಿಗೆ ಮಾಡಿದ್ದಿರೊ ಇಲ್ಲವೊ ಎಂದು ವಿಚಾರಿಸಬಹುದು. ಅವರು ಯಾರನ್ನು ಉದ್ದೇಶಿಸಿ ಹೇಳಿರುವು ಮಾತು ಎಂಬುದು ಗೊತ್ತಿಲ್ಲ,” ಎಂದು ಸ್ಪೋರ್ಟ್ಸ್‌ ಟಾಕ್‌ನಲ್ಲಿ ಗವಾಸ್ಕರ್ ನುಡಿದಿದ್ದಾರೆ.

“ಅವರಿಗೆ ಯಾವ ರೀತಿಯ ಮೆಸೇಜ್‌ ಬೇಕಾಗಿತ್ತು ಎಂಬುದು ಗೊತ್ತಿಲ್ಲ. ಪ್ರೇರಣೆಯ ಬಗ್ಗೆ ಮಾತನಾಡಿದ್ದೇ? ಅವರು ನಾಯಕತ್ವ ತೊರೆದವರಾಗಿರುವ ಕಾರಣ ಅವರಿಗೆ ಮತ್ತೆ ಪ್ರೇರಣೆಯ ಅಗತ್ಯವಿಲ್ಲ,” ಎಂದು ಗವಾಸ್ಕರ್‌ ನುಡಿದಿದ್ದಾರೆ.

“ಈಗ ಕೊಹ್ಲಿ ನಾಯಕರಲ್ಲ. ಹೀಗಾಗಿ ಅವರು ಯಾವುದರ ಬಗ್ಗೆಯೂ ಚಿಂತೆ ಮಾಡಬೇಕಾಗಿಲ್ಲ. ನಾಯಕರಾಗಿದ್ದ ವೇಳೆಯಲ್ಲಿ ಉಳಿದ ಆಟಗಾರರ ಬಗ್ಗೆ ಯೋಚನೆ ಮಾಡಬೇಕು. ಈಗ ಅದರ ಯೋಚನೆ ಇಲ್ಲ. ಹೀಗಾಗಿ ಆಟದ ಬಗ್ಗೆ ಗಮನ ಕೇಂದ್ರೀಕರಿಸಿದರೆ ಸಾಕು,” ಎಂದು ಗವಾಸ್ಕರ್‌ ಸಲಹೆ ಕೊಟ್ಟರು.

ಇದನ್ನೂ ನೋಡಿ | Virat Kohli | ಸ್ಥೈರ್ಯ ಕಳೆದುಕೊಂಡು ಒಂದು ತಿಂಗಳು ಬ್ಯಾಟೇ ಮುಟ್ಟಿರಲಿಲ್ಲ ಎಂದ ವಿರಾಟ್ ಕೊಹ್ಲಿ!

Exit mobile version