ಮೆಲ್ಬೋರ್ನ್: ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವ ಸಮರದಲ್ಲಿ ಭಾರತದ ಪ್ರದರ್ಶನ ನಿರಾಶದಾಯಕವಾಗಿತ್ತು. ಅದಕ್ಕೆ ಕಾರಣಗಳು ಹಲವು. ಆದರೆ ಅಲ್ಲಿಂದ ಈ ವಿಶ್ವ ಕಪ್(T20 World Cup) ವರೆಗೆ ತಂಡದಲ್ಲಿ ಬಹಳಷ್ಚು ಬದಲಾವಣೆಗಳಾಗಿದೆ. ಕೋಚ್, ನಾಯಕ, ಹೊಸ ಹೊಸ ಪ್ರಯೋಗಗಳು ಹೀಗೆ ಹಲವಾರು ಬದಲಾವಣೆ ಕಂಡು ಈ ಬಾರಿ ವಿಶ್ವ ಕಪ್ ಆಡುತ್ತಿರುವ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ತೋರಬಹುದೆಂದು ಅವಲೋಕನವೊಂದನ್ನು ಮಾಡಲಾಗಿದೆ.
ಬುಮ್ರಾ ಗೈರು ಕಾಡಬಹುದೇ?
ಜಸ್ಪ್ರೀತ್ ಬುಮ್ರಾ ಅಲಭ್ಯತೆಯಲ್ಲಿ ಏಷ್ಯಾ ಕಪ್ ಆಡಿದ ಭಾರತದ ಬೌಲಿಂಗ್ ಬಲ ಏನೆಂದು ಈಗಾಗಲೇ ತಿಳಿದಿದೆ. ತಂಡದಲ್ಲಿರುವ ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಕರೆಯಲ್ಪಟ್ಟ ಹರ್ಷಲ್ ಪಟೇಲ್ ಕೂಡಾ ಇತ್ತೀಚೆಗೆ ತಮ್ಮ ಬೌಲಿಂಗ್ ತೀಕ್ಷ್ಣತೆ ಕಳೆದುಕೊಂಡಿದ್ದಾರೆ. ಅನುಭವಿ ಭುವನೇಶ್ವರ್ ಕುಮಾರ್ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಆದ್ದರಿಂದ ಮೊಹಮ್ಮದ್ ಶಮಿ ಮೇಲೆ ತಂಡದ ಬೌಲಿಂಗ್ ಭವಿಷ್ಯ ಅಡಗಿದೆ. ಒಟ್ಟಾರೆ ಟೀಮ್ ಇಂಡಿಯಾಕ್ಕೆ ಬುಮ್ರಾ ಅಲಭ್ಯತೆ ಕಾಡುವುದು ಖಚಿತ.
ಹೊಸ ರೂಪದಲ್ಲಿ ಟೀಮ್ ಇಂಡಿಯಾ
ಕಳೆದ ವರ್ಷ ವಿರಾಟ್ ಕೊಹ್ಲಿ ನಾಯಕತ್ವ ಮತ್ತು ರವಿ ಶಾಸ್ತ್ರಿ ನೇತೃತ್ವದಲ್ಲಿ ಭಾರತ ತಂಡ ಟಿ20 ವಿಶ್ವ ಕಪ್‌ನಲ್ಲಿ ಕಣಕ್ಕಿಳಿದಿತ್ತು. ಅದಾಗಲೇ ತಂಡದ ನಾಯಕತ್ವದಿಂದ ಕೊಹ್ಲಿ ಮತ್ತು ಕೋಚ್ ಹುದ್ದೆಯಿಂದ ರವಿ ಶಾಸ್ತ್ರಿ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದರು. ಇದರ ಬಳಿಕ ರಾಹುಲ್ ದ್ರಾವಿಡ್ ತಂಡದ ತರಬೇತುದಾರರಾಗಿ ಮತ್ತು ನಾಯಕನಾಗಿ ರೋಹಿತ್ ಶರ್ಮ ಜತೆಯಾಟ ಶುರುವಾಯಿತು. ಈ ಜೋಡಿಯಿನ್ನೂ ಅದ್ಭುತ ಎನ್ನುವಂತಹ ಯಾವುದೇ ದೊಡ್ಡ ಯಶಸ್ಸು ಕೊಟ್ಟಿಲ್ಲ. ಇದೀಗ ಈ ಜೋಡಿ ವಿಶ್ವ ಕಪ್ ಗೆಲ್ಲುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್
ದುರದೃಷ್ಟವಶಾತ್ ಕಳೆದ ಎರಡು ವರ್ಷದಲ್ಲಿ ತೀವ್ರ ರನ್ ಬರಗಾಲ ಎದುರಿಸಿದ್ದ, ವಿರಾಟ್ ಕೊಹ್ಲಿ ಅದೃಷ್ಟವಶಾತ್ ವಿಶ್ವ ಕಪ್ ಆರಂಭದ ಹೊತ್ತಿನಲ್ಲೇ ಉತ್ತಮ ಲಯಕ್ಕೆ ಮರಳಿದ್ದಾರೆ. ಈ ಕೂಟದಲ್ಲಿ ಅವರ ನೈಜ ಸಾಮರ್ಥ್ಯ ಪ್ರಕಟವಾದರೆ ಭಾರತ ಕಪ್ ಗೆಲ್ಲುವುದು ನಿಶ್ಚಿತ. ಇವರಿಗೆ ರಾಹುಲ್ ಮತ್ತು ರೋಹಿತ್ ಉತ್ತಮ ಸಾಥ್ ನೀಡಬೇಕಷ್ಟೆ.
ಸೂರ್ಯಕುಮಾರ್ ಮೇಲೆ ಭರವಸೆ
ಭಾರತ ಇತ್ತೀಚೆಗೆ ಆಡಿದ ಎಲ್ಲ ಟಿ20 ಮತ್ತು ಏಕದಿನ ಸರಣಿಯಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ತೋರಿದ ಸೂರ್ಯಕುಮಾರ್ ಯಾದವ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಲಾಗಿದೆ. ಈ ಟೂರ್ನಿಯಲ್ಲಿಯೂ ಇವರು ಸಾಮರ್ಥ್ಯಕ್ಕೆ ತಕ್ಕಂತೆ ಸಿಡಿದರೆ ಭಾರತ ಚಾಂಪಿಯನ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಕಾರ್ತಿಕ್-ಪಾಂಡ್ಯ ಪ್ರದರ್ಶನ ಮುಖ್ಯ
ಧೋನಿ ಬಳಿಕ ಟೀಮ್ ಇಂಡಿಯಾ ಫಿನಿಶರ್ ಪಾತ್ರ ವಹಿಸಿದ ದಿನೇಶ್ ಕಾರ್ತಿಕ್ ಮತ್ತು ತಂಡದ ಏಕೈಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರದರ್ಶನ ಕೂಡ ಇಲ್ಲಿ ಪ್ರಧಾನವಾಗಿದೆ. ಏಕೆಂದರೆ ಸ್ಲಾಗ್ ಓವರ್ಗಳಲ್ಲಿ ಈ ಇಬ್ಬರು ಆಟಗಾರರು ಸಿಡಿದು ನಿಂತು ದೊಡ್ಡ ಮೊತ್ತ ಪೇರಿಸುವ ಜವಾಬ್ದಾರಿ ಇವರ ಹೆಗಲ ಮೇಲಿದೆ. ಆದ್ದರಿಂದ ಈ ಉಭಯ ಆಟಗಾರರು ಶಕ್ತಿ ಮೀರಿ ಪ್ರದರ್ಶನ ತೋರುವುದು ಅತ್ಯಗತ್ಯ.
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್‌ನಲ್ಲಿ ಟೀಮ್ ಇಂಡಿಯಾದ ಸಾಧನೆ, ಸವಾಲು