Site icon Vistara News

ನಾನು ಕ್ಯಾನ್ಸರ್‌ ಇದ್ದೂ ಆಡಿದೆ, ನಿನ್ನದೇನು? ಶುಭಮನ್​ ಗಿಲ್‌ಗೆ ಧೈರ್ಯ ತುಂಬಿದ ಯುವರಾಜ್​!

yuvraj singh and shubman gill

ಮುಂಬಯಿ: ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್(Shubham Gill)​ ಅವರನ್ನು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಹೇಗೆ ಬಲಪಡಿಸಲಾಗಿದೆ ಎಂಬುದನ್ನು ಯುವರಾಜ್ ಸಿಂಗ್(Yuvraj Singh) ಬಹಿರಂಗಪಡಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ 2011ರ ವಿಶ್ವಕಪ್​ ಹೀರೊ ಯುವರಾಜ್​ ಸಿಂಗ್​ ತನ್ನದೇ ಉದಾಹರಣೆಯನ್ನು ಮುಂದಿಟ್ಟು ಗಿಲ್​ ಚೇತರಿಕೆಗೆ ಧೈರ್ಯ ತುಂಬಿದ್ದಾರೆ. “2011ರ ವಿಶ್ವಕಪ್​ನಲ್ಲಿ(World Cup 2011) ನಾನು ಕ್ಯಾನ್ಸರ್​ನಿಂದ ಬಳಲುತ್ತಿದ್ದೆ. ಈ ವಿಚಾರ ನನಗೆ ಮಾತ್ರ ತಿಳಿದಿತ್ತು. ಆದರೂ ನಾನು ಜಗ್ಗಲಿಲ್ಲ, ಕುಗ್ಗಲಿಲ್ಲ. ಪಂದ್ಯವನ್ನು ಆಡಲಿಳಿದೆ. ಇದನ್ನೇ ನೀನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ನಿನ್ನಿಂದ ಎಲ್ಲವು ಸಾಧ್ಯ. ಆತ್ಮವಿಶ್ವಾಸ ಇರಲಿ. ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವುದನ್ನು ಎದುರು ನೋಡುತ್ತಿರುವೆ” ಎಂದು ಹೇಳುವ ಮೂಲಕ ಗಿಲ್​ಗೆ ಆತ್ಮವಿಶ್ವಾಸ ತುಂಬಿದ್ದಾರೆ.

ಗಿಲ್​ ಈಸ್​ ರೆಡಿ

“ಶುಭಮ್ ಗಿಲ್ ಕೋ ಮೈನೆ ತಗ್ದಾ ಕರ್ ದಿಯಾ(ನಾನು ಶುಭಮನ್​ ಗಿಲ್ ಅವರನ್ನು ಬಲಪಡಿಸಿದ್ದೇನೆ). ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವಾಗ ವಿಶ್ವಕಪ್‌ನಲ್ಲಿ ಆಡಿದ್ದೇನೆ ಎಂದು ಅವರಿಗೆ ಹೇಳಿದ್ದೇನೆ. ಇದನ್ನೂ ಅವರು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ತಂಡವನ್ನು ಸೇರಲು ಆಶಾದಾಯಕರಾಗಿದ್ದಾರೆ. ಜ್ವರ ಮತ್ತು ಡೆಂಗ್ಯೂ ಇದ್ದಾಗ ಕ್ರಿಕೆಟ್ ಪಂದ್ಯವನ್ನು ಆಡುವುದು ನಿಜವಾಗಿಯೂ ಕಠಿಣವಾಗಿದೆ ಎನ್ನುವುದು ನನಗೂ ತಿಳಿದಿದೆ. ಅಲ್ಲದೆ ನೋವನ್ನು ನಾನು ಕೂಡ ಅನುಭವಿಸಿದ್ದೇನೆ. ಖಂಡಿತವಾಗಿಯೂ ಗಿಲ್​ ಪಾಕ್​ ವಿರುದ್ಧ ಆಡುತ್ತಾರೆ” ಎಂದರು.

ಕ್ಯಾನ್ಸರ್​ ಜತೆಗೆ ವಿಶ್ವಕಪ್ ಗೆದ್ದ ಯುವಿ

2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದ ಯುವರಾಜ್‌, 362 ರನ್‌ ಹಾಗೂ 15 ವಿಕೆಟ್‌ ಸಂಪಾದಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಆದರೆ ಟೂರ್ನಿಯುದ್ದಕೂ ಅವರು ಮೈದಾನದಲ್ಲಿ ಎದುರಾಳಿಗಳ ವಿರುದ್ಧ ಮಾತ್ರವಲ್ಲ ಮಹಾಮಾರಿ ಕ್ಯಾನ್ಸರ್‌ ವಿರುದ್ಧವೂ ಹೋರಾಡಿದ್ದರು. ಕೆಲ ಪಂದ್ಯಗಳಲ್ಲಿ ಮೈದಾನದಲ್ಲೇ ರಕ್ತವನ್ನು ಕಾರಿದ್ದರು. ಆದರೂ ಛಲ ಬಿಡದೆ ವಿಶ್ವಕಪ್​ ಜತೆಗೆ ಕ್ಯಾನ್ಸರ್‌ಗೂ ಸಡ್ಡು ಹೊಡೆದು ಗೆಲುವು ಕಂಡರು.

ಇದನ್ನೂ ಓದಿ IND vs PAK: ಮೋದಿ ನಾಡಲ್ಲಿ ಪಾಕ್​ ಆಟಗಾರರಿಗೆ ಭರ್ಜರಿ ಸ್ವಾಗತ

ಅಭ್ಯಾಸ ಆರಂಭಿಸಿದ ಗಿಲ್​

ಚೆನ್ನೈಯ ಆಸ್ಪತ್ರೆಗೆ ದಾಖಲಾಗಿದ್ದ ಗಿಲ್​ ಅವರು ಈಗ ಚೇತರಿಕೆ ಕಂಡು ಅಹಮದಾಬಾದ್​ಗೆ ತಲುಪಿದ್ದಾರೆ. ಅಲ್ಲದೆ ಬ್ಯಾಟಿಂಗ್​ ಅಭ್ಯಾಸವನ್ನು ನಡೆಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. “ಗಿಲ್​ ಅವರು ಪ್ರತ್ಯೇಕವಾಗಿ ಅಭ್ಯಾಸ ನಡೆಸಿದ್ದಾರೆ. ಅವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದು ಬಹತೇಕ ಖಚಿತ ಎನ್ನುವಂತಿದೆ” ಎಂದು ಬಿಸಿಸಿಐ ಮೂಲಗಳು ಹೇಳಿರುವದಾಗಿ ನ್ಯೂಸ್​ 18 ವರದಿ ಮಾಡಿದೆ.

ಅಕ್ಟೋಬರ್​ 14ಕ್ಕೆ ಇಂಡೋ-ಪಾಕ್​ ಕದನ

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಇಂಡೋ-ಪಾಕ್​ ಕದನ ಅಕ್ಟೋಬರ್​ 14ರಂದು ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ಪಂದ್ಯದಲ್ಲಿ ಶುಭಮನ್​ ಗಿಲ್​ ಅವರು ಆಡುವ ಕುರಿತು ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಶುಕ್ರವಾರ ಮಾಹಿತಿ ಪ್ರಕಟಿಸುವ ಸಾಧ್ಯತೆ ಇದೆ.

Exit mobile version