Site icon Vistara News

Virat kohli | ಹೈದರಾಬಾದ್ ಕ್ರಿಕೆಟ್ ಸ್ಟೇಡಿಯಮ್‌ ಎಂದರೆ ವಿರಾಟ್‌ ಕೊಹ್ಲಿಗೆ ಬಲು ಪ್ರೀತಿ

virat kohli

ಹೈದರಾಬಾದ್‌ : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿಗೆ ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರಿಕೆಟ್ ಸ್ಟೇಡಿಯಮ್‌ ಎಂದರೆ ಸಿಕ್ಕಾಪಟ್ಟೆ ಪ್ರೀತಿ. ಯಾಕೆಂದರೆ ಈ ಕ್ರೀಡಾಂಗಣದಲ್ಲಿ ಆಡಿದ ಕಳೆದ ಎರಡು ಟಿ೨೦ ಪಂದ್ಯಗಳಲ್ಲಿ ಅವರು ಸತತ ೨ ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಭಾನುವಾರ ನಡೆದ ಆಸ್ಟ್ರೇಲಿಯಾ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ೨೦ ಸರಣಿಯ ಕೊನೇ ಪಂದ್ಯದಲ್ಲಿ ಅವರು ಅಮೋಘ ೬೩ ರನ್‌ ಬಾರಿಸಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಜತೆ ಅವರು ಕಟ್ಟಿದ ಉಪಯುಕ್ತ ಇನಿಂಗ್ಸ್‌ ಭಾರತ ತಂಡಕ್ಕೆ ಆರು ವಿಕೆಟ್‌ಗಳ ವಿಜಯ ತಂದುಕೊಟ್ಟಿತಲ್ಲದೆ, ಸರಣಿಯನ್ನು ೨-೧ ಅಂತರದಿಂದ ವಶಪಡಿಸಿಕೊಳ್ಳಲು ನೆರವಾಯಿತು.

ಭಾರತ ತಂಡ ತಂಡ ೩೦ ರನ್‌ಗಳಿಗೆ ಎರಡು ವಿಕೆಟ್‌ಕಳೆದುಕೊಂಡಾಗ ಜತೆಯಾದ ಸೂರ್ಯಕುಮಾರ್‌ ಹಾಗೂ ವಿರಾಟ್‌ ಕೊಹ್ಲಿ ೧೦೪ ರನ್‌ಗಳ ಜತೆಯಾಟ ನೀಡಿದ್ದರು. ಆದರೆ, ಕೊನೇ ಓವರ್‌ನ ೨ನೇ ಎಸೆತದಲ್ಲಿ ವಿರಾಟ್‌ ಕೊಹ್ಲಿ ಔಟಾಗಿ ನಿರಾಸೆ ಎದುರಿಸಿದರು. ಆದರೂ ಜಯದಲ್ಲಿ ಅವರ ಪಾಲು ದೊಡ್ಡದಿದೆ.

ವಿರಾಟ್‌ ಕೊಹ್ಲಿ ಇದೇ ಮೈದಾನದಲ್ಲಿ ೨೦೧೯ರಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವೊಂದನ್ನು ನೀಡಿದ್ದರು. ಆ ಪಂದ್ಯದಲ್ಲೂ ಅವರೇ ಗೆಲುವಿನ ರೂವಾರಿಯಾಗಿದ್ದರು. ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ಆ ಹಣಾಹಣಿಯಲ್ಲಿ ವಿಂಡೀಸ್‌ ಬಳಗ ಮೊದಲು ಬ್ಯಾಟ್‌ ಮಾಡಿ ೨೦೭ ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್‌ ಮಾಡಿದ ಭಾರತ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿ ೧೮.೪ ಓವರ್‌ಗಳಲ್ಲಿ ೨೦೯ ರನ್‌ ಬಾರಿಸಿ ಜಯಶಾಲಿಯಾಗಿತ್ತು. ಆ ಪಂದ್ಯದಲ್ಲಿ ವಿರಾಟ್‌ ೫೦ ಎಸೆತಗಳಲ್ಲಿ ಅಜೇಯ ೯೪ ರನ್‌ ಬಾರಿಸಿದ್ದರು. ಈ ಎರಡು ಇನಿಂಗ್ಸ್‌ಗಳ ಮೂಲಕ ವಿರಾಟ್‌ ಕೊಹ್ಲಿ ಅವರು ಹೈದರಾಬಾದ್‌ ತಮ್ಮ ಫೇವರಿಟ್‌ ಕ್ರೀಡಾಂಗಣ ಎಂಬುದನ್ನು ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ | Virat Kohli | ಆರ್‌ಸಿಬಿ ಅಲ್ರೊ, ಟೀಮ್‌ ಇಂಡಿಯಾ ಎಂದು ಪ್ರೇಕ್ಷಕರಿಗೆ ಸನ್ನೆ ಮಾಡಿದ ವಿರಾಟ್‌ ಕೊಹ್ಲಿ

Exit mobile version