ಗಯಾನಾ: ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್(Yuzvendra Chahal) ಅವರು ವಿಂಡೀಸ್ ಪ್ರವಾಸದ ಏಕದಿನ ಸರಣಿಯಲ್ಲಿ ಅವಕಾಶ ಸಿಗದ ಬಗ್ಗೆ ಮೌನ ಮುರಿದಿದ್ದಾರೆ. ತಂಡದ ಸಂಯೋಜನೆ ನಾನು ಎಂದಿಗೂ ಬದ್ಧ ಎಂದು ಹೇಳುವ ಮೂಲಕ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಚಹಲ್ ಅವರಿಗೆ ಟಿ20 ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇದಕ್ಕೂ ಮುನ್ನ ನಡೆದ ಏಕದಿನ ಮತ್ತು ಹಿಂದಿನ ಸರಣಿಗಳಲ್ಲಿಯೂ ಚಹಲ್ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಒಂದು ಕಾಲದಲ್ಲಿ ತಂಡದ ಪ್ರಧಾನ ಸ್ಪಿನ್ನರ್ ಆಗಿದ್ದ ಅವರು ಉತ್ತಮ ಫಾರ್ಮ್ನಲ್ಲಿದ್ದರೂ ಅವರಿಗೆ ಆಡುವ ಅವಕಾಶ ನೀಡಲೇ ಇಲ್ಲ. ಇದೇ ವಿಚಾರವಾಗಿ ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆ ಉತ್ತರಿಸಿದ ಚಹಲ್, “ತಂಡದ ಸಂಯೋಜನೆ ನಮ್ಮ ಮೊದಲ ಆದ್ಯತೆ. ಇದೇನು ಹೊಸತಲ್ಲ. ಏಳನೇ ಕ್ರಮಾಂಕದಲ್ಲಿ ನಾವು ಸಾಮಾನ್ಯವಾಗಿ ಆಲ್ರೌಂಡರ್ ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸುತ್ತೇವೆ. ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದ್ದಾಗ ಮಾತ್ರವೇ ಮೂವರು ಸ್ಪಿನ್ನರ್‌ಗಳನ್ನು ಆಡಿಸಲಾಗುತ್ತದೆ. ಹೀಗಾಗಿ ನನಗೆ ಅವಕಾಶ ಸಿಗುತ್ತಿಲ್ಲ. ಏಕದಿನದಲ್ಲಿ ಕುಲ್ದೀಪ್ಗೆ ಸ್ಥಾನ ನೀಡಲು ಪ್ರಮುಖ ಕಾರಣವೆಂದರೆ ಅವರು ಲೆಗ್ ಸ್ಪಿನ್ ಉತ್ತಮವಾಗಿ ಮಾಡುತ್ತಾರೆ. ಕುಲ್ದೀಪ್ ನಿಜಕ್ಕೂ ಅದ್ಭುತ ಬೌಲರ್. ಹಾಗಾಗಿ ತಂಡ ಅವರ ಬೆನ್ನಿಗೆ ನಿಂತಿದೆ” ಎಂದು ಚಹಲ್ ಹೇಳಿದರು.
“ಕೆಲ ಸಂದರ್ಭಗಳಲ್ಲಿ ಆಟಗಾರರು ಒಂದೆರಡು ಸರಣಿಗಳಿಂದ ಹೊರಗುಳಿದರೆ ಅವರು ತಂಡದಿಂದಲೇ ಹೊರಬಿದ್ದಿದ್ದಾರೆ ಎಂದು ಅರ್ಥವಲ್ಲ. ಪರಿಸ್ಥಿತಿಗೆ ಅನುಗುಣವಾಗಿ ತಂಡವನ್ನು ರಚಿಸಲಾಗುತ್ತದೆ. ಅಂತಿಮವಾಗಿ ತಂಡ ಗೆಲ್ಲುವುದು ಮುಖ್ಯ ಹೊರತು ವೈಯಕ್ತಿಕ ಲಾಭವನ್ನು ಇಲ್ಲಿ ನೋಡಬಾರದು” ಎಂದು ಚಹಲ್ ಹೇಳಿದ್ದಾರೆ.
ಇದನ್ನೂ ಓದಿ Pat Cummins: ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್
“ನಾನು ಯಾವತ್ತು ತಂಡದ ಪರ ಉತ್ತಮ ಪ್ರದರ್ಶನ ತೋರುವ ಪ್ರಯತ್ನವನ್ನೇ ಮಾಡುತ್ತೇನೆ. ಅವಕಾಶ ಸಿಕ್ಕಾಗಲೆಲ್ಲ ನಾನು ಇದನ್ನು ತೋರಿಸಿಕೊಟ್ಟಿದ್ದೇನೆ. ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದರೂ ನಾನು ಕೂಡ ತಂಡದ ಭಾಗವಾಗಿರುತ್ತೇನೆ. ಕ್ರಿಕೆಟ್ ಎನ್ನುವುದು ವೈಯಕ್ತಿಕ ಆಟವಲ್ಲ. ಇದು ತಂಡದ ಆಟವಾಗಿದೆ. ಹದಿನೈದು ಆಟಗಾರರ ಪೈಕಿ ಕೇವಲ 11 ಆಟಗಾರರಿಗೆ ಮಾತ್ರ ಆಡುವ ಬಳಗದಲ್ಲಿ ಅವಕಾಶ ದೊರೆಯುತ್ತದೆ ಒಟ್ಟಾರೆ ತಂಡದ ಏಳಿಗೆ ಮುಖ್ಯವಾಗಿರುತ್ತದೆ” ಎಂದು ಚಹಲ್ ಹೇಳಿದರು.