Site icon Vistara News

Rishabh Pant: ಧೋನಿ ಜತೆಗಿನ ಹೋಲಿಕೆಯಿಂದ ತೀವ್ರ ಒತ್ತಡಕ್ಕೊಳಗಾಗಿದ್ದೆ: ಪಂತ್

rishabh pant and ms dhoni

ಮುಂಬಯಿ: ಟೀಮ್​ ಇಂಡಿಯಾ(team india) ಪರ ಆಡುವ ಆರಂಭಿಕ ದಿನದಲ್ಲಿ ಪ್ರೇಕ್ಷಕರು ಮಹೇಂದ್ರ ಸಿಂಗ್ ಧೋನಿ(MS Dhoni) ಅವರೊಂದಿಗೆ ತುಲನೆ ಮಾಡಿ ನನ್ನ ಸಾಮರ್ಥ್ಯ ಅಳೆಯುತ್ತಿದ್ದರು. ಇದರಿಂದ ನಾನು ಬಹಳ ಒತ್ತಡಕ್ಕೊಳಗಾಗಿ ಕೋಣೆಯಲ್ಲಿ ಒಬ್ಬನೇ ಕುಳಿತು ಅಳುತ್ತಿದ್ದೆ ಎಂದು ರಿಷಭ್ ಪಂತ್(Rishabh Pant) ಹೇಳಿದ್ದಾರೆ.

ಸ್ಟಾರ್​ ಸ್ಟೋರ್ಟ್ಸ್(Star Sports)​ ನಡೆಸಿದ ‘ಬಿಲೀವ್ ರಿಷಭ್​ ಪಂತ್” ವಿಶೇಷ ಸಂದರ್ಶನದಲ್ಲಿ ಅಂದಿನ ಅಪಘಾತದ ಕರಾಳ ನೆನಪನ್ನು ಬಿಚ್ಚಿಟುವ ವೇಳೆ ಪಂತ್ ಅವರು ಈ ವಿಚಾರವನ್ನು ಹೇಳಿದರು. ಧೋನಿ ಜತೆಗಿನ ನನ್ನ ಸಂಬಂಧವನ್ನು ವಿವರಿಸಲು ನನಗೆ ಯಾವಾಗಲೂ ಕಷ್ಟವಾಗುತ್ತದೆ. ನಾನು ಧೋನಿಯೊಂದಿಗೆ ಎಲ್ಲವನ್ನೂ ಚರ್ಚಿಸುತ್ತೇನೆ. ಅವರಿಂದ ನಾನು ತುಂಬಾ ಕಲಿತಿದ್ದೇನೆ. ನಾನು ಯಾರೊಂದಿಗೂ ಚರ್ಚಿಸದ ವಿಷಯಗಳನ್ನು ನಾನು ಅವರೊಂದಿಗೆ ಚರ್ಚಿಸುತ್ತೇನೆ. ಅದು ಅವರ ಜತೆಗಿನ ಸಂಬಂಧ. ನನ್ನ ಕ್ರಿಕೆಟ್​ ಉತ್ತಮಗೊಳ್ಳಲು ಕೂಡ ಅವರು ನೀಡಿದ ಸಲಹೆಯೇ ಕಾರಣ ಎಂದು ಪಂತ್​ ಸಂದರ್ಶನದಲ್ಲಿ ಹೇಳಿದ್ದಾರೆ.

ಧೋನಿ ಜತೆಗಿನ ತುಲನೆಯಿಂದ ಒತ್ತಡಕ್ಕೆ ಒಳಗಾಗಿದ್ದೆ


‘ನಾನು ಟೀಮ್​ ಇಂಡಿಯಾಕ್ಕೆ ಬಂದ ಆರಂಭಿಕ ದಿನಗಳಲ್ಲಿ ಕೀಪಿಂಗ್​ ಮಾಡುತ್ತಿರಲಿಲ್ಲ. ಕೇವಲ ಬ್ಯಾಟಿಂಗ್​ ಮಾಡುತ್ತಿದ್ದೆ. ಧೋನಿ ವಿದಾಯದ ಬಳಿಕ ಪೂರ್ಣ ಪ್ರಮಾಣದ ಕೀಪಿಂಗ್ ಆರಂಭಿಸಿದೆ. ಮೊಹಾಲಿಯಲ್ಲಿ ನಡೆದಿದ್ದ ಪಂದ್ಯವೊಂದರಲ್ಲಿ ನಾನು ಸ್ಟಂಪಿಂಗ್ ಮಾಡುವಾಗ ವಿಫಲನಾದೆ. ಆಗ ಪ್ರೇಕ್ಷಕರು ಧೋನಿ…ಧೋನಿ ಎಂದು ಕೂಗಿದರು. ಇದರಿಂದ ನಾನು ಒತ್ತಡಕ್ಕೆ ಒಳಗಾದೆ. ಪಂದ್ಯ ಮುಕ್ತಾಯದ ಬಳಿಕ ಎಲ್ಲ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಕೂಡ ಧೋನಿಯ ಸಾಮರ್ಥ್ಯವನ್ನು ನನ್ನ ಜತೆ ತುಲನೆ ಮಾಡಲಾರಂಭಿಸಿದವು. ಆಗ ತಾನೆ ನನಗೆ 20-21 ವರ್ಷ. ಈ ವಯಸ್ಸಿನಲ್ಲಿಯೇ ಧೋನಿ ಅಥವಾ ಯಾವುದೇ ಹಿರಿಯ ಕ್ರಿಕೆಟಿಗನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವುದು ಅಸಾದ್ಯ. ಹೀಗಿದ್ದರೂ ನನ್ನಿಂದ ಧೋನಿಯ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿತ್ತು. ಆದ್ದರಿಂದ ನಾನು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದೆ’ ಎಂದು ಈ ಸಂದರ್ಶನದಲ್ಲಿ ರಿಷಭ್ ಹೇಳಿದ್ದಾರೆ.

ಇದನ್ನೂ ಓದಿ Yashasvi Jaiswal: ಶತಕ ಬಾರಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಹೋಲಿಕೆ ಸರಿಯಲ್ಲ


‘ಕೆಲವರು ಬೆರಳೆಣಿಕೆಯ ಪಂದ್ಯ, ಇನ್ನೂ ಕೆಲವರು 500 ಪಂದ್ಯಗಳನ್ನು ಆಡಿರಬಹುದು. ಎಲ್ಲರೂ ಕೂಡ ಏರಿಳಿತಗಳನ್ನು ಕಂಡಿರುತ್ತಾರೆ. ಒಬ್ಬರನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಪಂತ್​ ಅಭಿಪ್ರಾಯಪಟ್ಟರು.

ಧೋನಿ-ಯುವಿ ಬೆಂಬಲ


‘ನಾನು ಭಾರತ ಪರ ಆಡುವಾಗ ಯುವರಾಜ್ ಸಿಂಗ್ ಮತ್ತು ಧೋನಿ ಕೂಡ ತಂಡದಲ್ಲಿ ಆಡುತ್ತಿದ್ದರು. ತಂಡದಲ್ಲಿ ನಾನು ಕೊಂಚ ತುಂಟನಾಗಿದ್ದೆ. ಚೇಷ್ಟೆಗಳನ್ನು ಮಾಡುತ್ತಿದ್ದೆ. ಆದರೂ ಕೂಡ ಹಿರಿಯ ಆಟಗಾರರಾಗಿದ್ದ ಯುವರಾಜ್​ ಸಿಂಗ್​ ಮತ್ತು ಧೋನಿ ಒಂದು ದಿನವೂ ಬೈದವರಲ್ಲ. ಬದಲಾಗಿ ಕ್ರಿಕೆಟ್​ನಲ್ಲಿ ಹೇಗೆ ಆಡಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದರು. ಅವರಿಬ್ಬರು ವಿದಾಯ ಹೊಂದಿದ ಬಳಿಕವೂ ಕೂಡ ನನ್ನ ಎಲ್ಲ ಏರಿತದಲ್ಲಿ ಜತೆಯಾಗಿ ನಿಂತಿದ್ದರು. ಅವರು ನನಗೆ ನೀಡಿದ ಬೆಂಬಲಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು.

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಅಂದಿನಿಂದ ಪಂತ್​ ಕ್ರಿಕೆಟ್​ನಿಂದ ಹೊರಗುಳಿದಿದ್ದಾರೆ. ಸಂಪೂರ್ಣ ತೇತರಿಕೆ ಕಂಡಿರುವ ಪಂತ್​ ಈ ಬಾರಿಯ ಐಪಿಎಲ್ ಋತುವಿನಲ್ಲಿ ಮೈದಾನಕ್ಕಿಳಿಯಲು ಸಿದ್ಧರಾಗಿದ್ದಾರೆ.

Exit mobile version