Site icon Vistara News

​Yuvraj Singh: ಕೊಹ್ಲಿ ಜತೆ ನಾನು ಮಾತನಾಡುವುದಿಲ್ಲ; ಯುವಿ ತರ್ಕಕ್ಕೆ ಕಾರಣವೇನು?

yuvraj singh and kohli

ಮುಂಬಯಿ: ಕೆಲ ದಿನಗಳ ಹಿಂದಷ್ಟೇ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ನನ್ನ ಆತ್ಮೀಯ ಮಿತ್ರ ಅಲ್ಲ ಎಂದು ಹೇಳಿಕೆ ನೀಡಿದ್ದ ಯುವರಾಜ್​ ಸಿಂಗ್(Yuvraj Singh)​ ಇದೀಗ ವಿರಾಟ್ ಕೊಹ್ಲಿ(Virat Kohli) ಜತೆ ನಾನು ಮಾತು ಬಿಟ್ಟಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

​ಯುವರಾಜ್​ ಸಿಂಗ್​ ಮತ್ತು ವಿರಾಟ್​ ಕೊಹ್ಲಿ ಉತ್ತಮ ಸ್ನೇಹಿತರು. ಇಬ್ಬರು ಎಲ್ಲೇ ಸಿಕ್ಕರು ಕೂಡ ತುಂಬಾ ಆತ್ಮೀಯತೆಯಿಂದಲೇ ಇರುತ್ತಾರೆ. ಅಲ್ಲದೆ ಕೊಹ್ಲಿಯನ್ನು ಸದಾ ಚೀಕೂ ಎಂದೇ ಕರೆಯುವ ಯುವರಾಜ್​ ಸಿಂಗ್,​ ಕೊಹ್ಲಿ ಏನೇ ಸಾಧನೆ ಮಾಡಿದರೂ ಮೊದಲ ಸಾಲಿನಲ್ಲಿ ನಿಂತು ಅಭಿನಂದಿಸುತ್ತಾರೆ. ಆದರೆ ಇದ್ದಕ್ಕಿದ್ದಂತೆ ಯುವರಾಜ್​ ಅವರು ತಾನು ಕೊಹ್ಲಿಯ ಜತೆ ಮಾತನಾಡುವುದಿಲ್ಲ ಎಂದಿದ್ದಾರೆ.

ಮಾತು ಬಿಡಲು ಕಾರಣವೇನು?

ಯುವರಾಜ್​ ಸಿಂಗ್​ ಅವರು ದಿಢೀರ್​ ಆಗಿ ವಿರಾಟ್​ ಕೊಹ್ಲಿ ಜತೆ ಮಾತು ಬಿಡಲೂ ಒಂದು ಪ್ರಮುಖ ಕಾರಣವಿದೆ. ಅದೇನೆಂದರೆ ಕೊಹ್ಲಿ ಅವರು ವಿಶ್ವಕಪ್​ ಟೂರ್ನಿಯಲ್ಲಿ ಬ್ಯೂಸಿ ಆಗಿರುವುದು. ಹೌದು, ಇದೇ ಕಾರಣಕ್ಕೆ ಕೊಹ್ಲಿ ಜತೆ ಮಾತು ಬಿಟ್ಟಿರುವುದಾಗಿ ಯುವಿ ಹೇಳಿದ್ದಾರೆ.

“ಪ್ರೀತಿಯ ಸಹೋದರ ವಿರಾಟ್ ಕೊಹ್ಲಿ ಜತೆ ನಾನು ಹೆಚ್ಚು ಮಾತನಾಡುವುದಿಲ್ಲ. ಆತ ವಿಶ್ವಕಪ್​ನಲ್ಲಿ ತುಂಬಾ ಬ್ಯುಸಿಯಾಗಿದ್ದಾನೆ. ಆತ ಆಟದಲ್ಲಿ ಕಾರ್ಯನಿರತನಾಗಿದ್ದಾನೆ. ಅದಕ್ಕಾಗಿಯೇ ನಾನು ಅವನಿಗೆ ತೊಂದರೆ ನೀಡುವುದಿಲ್ಲ. ವಿಶ್ವಕಪ್​ ಮುಗಿದ ತಕ್ಷಣ ನಾನು ಆತನ ಬಳಿ ಗಂಟೆಗಟ್ಟಲೆ ಮಾತನಾಡುತ್ತೇನೆ. ಆತ ಇನ್ನು ಹಲವು ಸಾಧನೆ ಮಾಡಬೇಕು. ವಿಶ್ವಕಪ್​ಗೆ ಮುತ್ತಿಕ್ಕುವುದನ್ನು ನೋಡಲು ನಾನು ಕಾತರಗೊಂಡಿದ್ದೇನೆ” ಎಂದು ಯುವಿ ಹೇಳಿದರು.

ಇದನ್ನೂ ಓದಿ Virat Kohli: ನಿಯಮ ಉಲ್ಲಂಘಿಸಿದರೇ ವಿರಾಟ್‌ ಕೊಹ್ಲಿ?; ಕ್ರಮ ಕೈಗೊಳ್ಳುವ ಸಾಧ್ಯತೆ!

ನವೆಂಬರ್​ 5ರಂದು 35ನೇ ಹುಟ್ಟುಹಬ್ಬ ಆಚರಿಸಿದ ಕೊಹ್ಲಿಗೆ ಯುವರಾಜ್​ ಸಿಂಗ್​ ವಿಶೇಷವಾಗಿ ಶುಭ ಹಾರೈಸಿದ್ದರು. ಇಬ್ಬರು ಟೀಮ್​ ಇಂಡಿಯಾದಲ್ಲಿ ಆಡುವ ವೇಳೆ ಕಳೆದಂತಹ ಸ್ಮರಣೀಯ ಕ್ಷಣದ ಫೋಟೊವನ್ನು ಹಂಚಿಕೊಂಡು ಹ್ಯಾಪಿ ಬರ್ತ್​ ಡೇ ಚೀಕೂ ಎಂದು ಬರೆದುಕೊಂಡಿದ್ದರು.

ನಾನು-ಧೋನಿ ಉತ್ತಮ ಸ್ನೇಹಿತರಲ್ಲ; ಯುವಿ

ಕೆಲವು ದಿನಗಳ ಹಿಂದೆ “ನಾನು ಮತ್ತು ಮಾಹಿ(ಧೋನಿ) ಆತ್ಮೀಯ ಸ್ನೇಹಿತರಲ್ಲ, ನಾವು ಕ್ರಿಕೆಟ್‌ನಲ್ಲಿ ಮಾತ್ರ ಸ್ನೇಹಿತರಾಗಿದ್ದೇವೆ. ನಾವು ಒಟ್ಟಿಗೆ ಆಡಿದ್ದೇವೆ. ಧೋನಿಯ ಜೀವನಶೈಲಿ ನನಗಿಂತ ತುಂಬಾ ಭಿನ್ನವಾಗಿತ್ತು, ಆದ್ದರಿಂದ ನಾವು ಎಂದಿಗೂ ಆತ್ಮೀಯ ಸ್ನೇಹಿತರಾಗಿರಲಿಲ್ಲ. ನಾವು ಕ್ರಿಕೆಟ್‌ನಿಂದ ಮಾತ್ರ ಸ್ನೇಹಿತರಾಗಿದ್ದೇವೆ. ನಾನು ಮತ್ತು ಮಾಹಿ ಮೈದಾನಕ್ಕಿಳಿದಾಗ ನಾವು ನಮ್ಮ ದೇಶಕ್ಕೆ ಶೇ.100ರಷ್ಟು ಗೆಲುವಿನ ಫಲಿತಾಂಶವನ್ನು ನೀಡಿದ್ದೇವೆ. ಅದರಲ್ಲಿ ಅವರು ನಾಯಕ, ನಾನು ಉಪನಾಯಕ, ನಾನು ತಂಡಕ್ಕೆ ಬಂದಾಗ ಇತರ ಆಟಗಾರರಿಗಿಂತ 4 ವರ್ಷ ಜೂನಿಯರ್ ಆಗಿದ್ದೆ. ನಾಯಕ​ ಮತ್ತು ಉಪನಾಯಕರಾಗಿದ್ದಾಗ ನಿರ್ಧಾರಗಳಲ್ಲಿ ವ್ಯತ್ಯಾಸಗಳಾಗುತ್ತದೆ” ಎಂದು ಯುವಿ ಹೇಳಿದ್ದರು.

ಧೋನಿಯ ಕೆಲ ನಿರ್ಧಾರ ಇಷ್ಟವಾಗುತ್ತಿರಲಿಲ್ಲ

“ಕೆಲವೊಮ್ಮೆ ಅವರು ನನಗೆ ಇಷ್ಟವಿಲ್ಲದ ನಿರ್ಧಾರಗಳನ್ನು ತೆಗೆದುಕೊಂಡರು. ಕೆಲವೊಮ್ಮೆ ಅವರು ಇಷ್ಟಪಡದ ನಿರ್ಧಾರಗಳನ್ನು ನಾನು ತೆಗೆದುಕೊಂಡಿದ್ದೇನೆ. ಅದು ಪ್ರತಿ ತಂಡದಲ್ಲಿ ಸಂಭವಿಸುತ್ತದೆ. ನಾನು ನನ್ನ ವೃತ್ತಿಜೀವನದ ಕೊನೆಯಲ್ಲಿದ್ದಾಗ ನನ್ನ ಫಾರ್ಮ್​ ಕಳೆದು ಕೊಂಡಾಗ ನಾನು ಧೋನಿ ಬಳಿ ಸಲಹೆ ಕೇಳಿದೆ. ಆಯ್ಕೆ ಸಮಿತಿಯು ಈಗ ನಿನ್ನನ್ನು ನೋಡುತ್ತಿಲ್ಲ” ಎಂದು ಧೋನಿ ಅಂದು ಹೇಳಿದ್ದಾಗಿ ಯುವಿ ಈ ಸಂದರ್ಶನದಲ್ಲಿ ಹೇಳಿದ್ದರು.

ಪ್ರತಿಯೊಬ್ಬರೂ ವಿಭಿನ್ನ ಜೀವನಶೈಲಿ ಹೊಂದಿದ್ದಾರೆ

“ನಿಮ್ಮ ತಂಡದ ಸದಸ್ಯರು ಮೈದಾನದ ಹೊರಗೆ ಉತ್ತಮ ಸ್ನೇಹಿತರಾಗಬೇಕಾಗಿಲ್ಲ. ಪ್ರತಿಯೊಬ್ಬರೂ ವಿಭಿನ್ನ ಜೀವನಶೈಲಿ, ಕೌಶಲ್ಯವನ್ನು ಹೊಂದಿದ್ದಾರೆ. ಕೆಲವು ಜನರು ನಿರ್ದಿಷ್ಟ ಜನರೊಂದಿಗೆ ಹ್ಯಾಂಗ್ ಔಟ್ ಮಾಡುತ್ತಾರೆ. ಮೈದಾನಕ್ಕೆ ಹೋಗಲು ನೀವು ಎಲ್ಲರೊಂದಿಗೆ ಉತ್ತಮ ಸ್ನೇಹಿತರಾಗಿರಬೇಕಾಗಿಲ್ಲ. ನೀವು ಯಾವುದೇ ತಂಡವನ್ನು ತೆಗೆದುಕೊಂಡರೂ ಎಲ್ಲ ಹನ್ನೊಂದು ಮಂದಿ ಹೊಂದಿಕೆಯಾಗುವುದಿಲ್ಲ. ಕೆಲವರು ಮಾಡುತ್ತಾರೆ, ಇನ್ನು ಕೆಲವರು ಇಲ್ಲ. ಮೈದಾನಕ್ಕೆ ಇಳಿದಾಗ ತಂಡಕ್ಕೆ ಕೊಡುಗೆ ನೀಡುವುದು ಮಾತ್ರ ಮರಿಯಬಾರದು” ಎಂದು ಯುವಿ ಹೇಳಿದ್ದರು.

Exit mobile version