ಮುಂಬಯಿ: ಟೀಮ್ ಇಂಡಿಯಾ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಒಲವು ತೋರುತ್ತಿದೆ ಎನ್ನುವ ಆರೋಪವನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ(Roger Binny) ಅಲ್ಲಗಳೆದಿದ್ದಾರೆ. ಅದರಂತೆ ಈ ಆರೋಪ ಶುದ್ಧ ಸುಳ್ಳು, ಐಸಿಸಿಗೆ ಬಿಸಿಸಿಐ ಮೇಲೆ ಯಾವುದೇ ಒಲವಿಲ್ಲ ಎಂದು ಕಡ್ಡಿ ಮುರಿದ ಹಾಗೆ ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಅಂಪೈರ್ಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಭಾರತೀಯ ಆಟಗಾರರು ನೋಬಾಲ್ ಕೇಳಿದ ತಕ್ಷಣ ಅವರ ಮನವಿಗೆ ಸಮ್ಮತಿ ಸೂಚಿಸುತ್ತ ಭಾರತ ತಂಡವನ್ನು ಸೆಮಿಫೈನಲ್ಗೇರಲೆಂದೇ ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಐಸಿಸಿಯೂ ಭಾರತ ತಂಡದ ಬೆಂಬಲಕ್ಕೆ ನಿಂತ್ತಿದೆ ಎಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಾಲಿ ಮತ್ತು ಮಾಜಿ ಆಟಗಾರರು ಹಾಗೂ ಈ ದೇಶದ ಕ್ರಿಕೆಟ್ ಮಂಡಳಿಯೂ ಆರೋಪ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರೋಜರ್ ಬಿನ್ನಿ ಇದೊಂದು ಸುಳ್ಳು ಆರೋಪ ಎಂದು ತಿಳಿಸಿದ್ದಾರೆ.
“ಐಸಿಸಿ ಎನ್ನುವುದು ಎಲ್ಲ ದೇಶದ ಕ್ರಿಕೆಟ್ ಮಂಡಳಿಯನ್ನು ನಿಯಂತ್ರಿಸುವ ಒಂದು ಉನ್ನತ ಸಂಸ್ಥೆಯಾಗಿದೆ. ಇದು ಯಾವುದೇ ದೇಶದ ಕ್ರಿಕೆಟ್ ಮಂಡಳಿಯನ್ನು ಬೆಂಬಲಿಸುವುದಿಲ್ಲ. ಎಲ್ಲ ವಿಚಾರದಲ್ಲಿಯೂ ಸಮಾನ ತೀರ್ಮಾನ ಕೈಗೊಳ್ಳುತ್ತದೆ. ಇದರಲ್ಲಿ ಮಲತಾಯಿ ಧೋರಣೆ ಇಲ್ಲ. ಸುಮ್ಮಸುಮ್ಮನೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ” ಎಂದು ಬಿಸಿಸಿಐ ಮತ್ತು ಟೀಮ್ ಇಂಡಿಯಾವನ್ನು ದೂರುತ್ತಿರುವವರ ವಿರುದ್ಧ ಬಿನ್ನಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶ ನಿರ್ಧಾರ ಹೇಗೆ?