ಪ್ಯಾರಿಸ್: ವೃತ್ತಿ ಜೀವನದ ಅತ್ಯಂತ ಮಹತ್ವದಾದ ಫಿಫಾ ವಿಶ್ವಕಪ್ ಗೆದ್ದ ಬಳಿಕ ಇನ್ನೇನು ಹೆಚ್ಚಿನ ಆಸೆ ಉಳಿದಿಲ್ಲ ಎಂದು ಹೇಳುವ ಮೂಲಕ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ಮತ್ತೆ ನಿವೃತ್ತಿಯ ಸುಳಿವು ನೀಡಿದ್ದಾರೆ.
ಕತಾರ್ ಫಿಫಾ ವಿಶ್ವಕಪ್ ಬಳಿಕ ನಿವೃತ್ತಿ ನೀಡುವುದಾಗಿ ಮೆಸ್ಸಿ ಘೋಷಿಸಿದ್ದರು. ಆದರೆ ವಿಶ್ವ ಕಪ್ ಗೆದ್ದ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಸದ್ಯ ನಿವೃತ್ತಿಯಾಗುವ ಯೋಚನೆ ನನ್ನ ಮುಂದಿಲ್ಲ, ಆರ್ಜೆಂಟೀನಾ ಪರ ಒಬ್ಬ ಚಾಂಪಿಯನ್ ಆಟಗಾರನಂತೆ ಇನ್ನೂ ಆಟ ಮುಂದು ವರಿಸುವ ಯೋಚನೆ ನನ್ನ ಮುಂದಿದೆ ಎಂದು ಹೇಳಿದ್ದರು.
ಆದರೆ ಈ ಬಾರಿ ಲಿಯೋನೆಲ್ ಮೆಸ್ಸಿ ನಿವೃತ್ತಿ ಘೋಷಿಸುವುದು ಪಕ್ಕಾ ಎಂಬತ್ತಿದೆ. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ವೈಯಕ್ತಿಕವಾಗಿ ವೃತ್ತಿಜೀವನದಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಇನ್ನೇನು ಬಯಕೆ ನನ್ನ ಮುಂದೆ ಇಲ್ಲ ಹೀಗೆ ಹೇಳುವ ಮೂಲಕ ಮೆಸ್ಸಿ ಫುಟ್ಬಾಲ್ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದಾರೆ.
“ಫುಟ್ಬಾಲ್ ಆರಂಭಿಸಿದಾಗ ನಾನು ಈ ಮಟ್ಟದ ಸಾಧನೆ ತೋರುತ್ತೇನೆ ಎಂದು ಎಂದಿಗೂ ನಾನು ಊಹಿಸಿರಲಿಲ್ಲ. ಫುಟ್ಬಾಲ್ ವೃತ್ತಿಜೀವನದಲ್ಲಿದ್ದ ಒಂದೇ ಕೊರಗು ವಿಶ್ವ ಕಪ್ ಗೆಲ್ಲುವುದಾಗಿತ್ತು. ಇದೂ ಕೂಡ ನೆರವೇರಿದೆ. ಎಲ್ಲ ಪ್ರತಿಷ್ಠಿತ ಟೂರ್ನಿಗಳಲ್ಲಿಯೂ ಕಪ್ ಗೆದ್ದಿರುವ ನನಗೆ ಇನ್ನೇನು ಆಸೆಗಳು ಉಳಿದಿಲ್ಲ” ಎಂದು ಮೆಸ್ಸಿ ಗೋಲ್ ಟಾಟ್ ಕಾಮ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ Lionel Messi: ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಹಿಂದಿಕ್ಕಿದ ಲಿಯೋನೆಲ್ ಮೆಸ್ಸಿ
ನೆಚ್ಚಿನ ಆಟಗಾರ ಡಿಯಾಗೋ ಮರಡೋನಾ ನನಗೆ ವಿಶ್ವ ಕಪ್ ಹಸ್ತಾಂತರಿಸಿದ್ದರೆ, ಅಥವಾ ಕನಿಷ್ಠ ವಿಶ್ವ ಕಪ್ ಗೆಲುವನ್ನು ಅವರು ನೋಡುತ್ತಿದ್ದರೆ ನನ್ನ ಜೀವನ ಸಾರ್ಥಕವಾಗುತ್ತಿತ್ತು. ಆದರೆ ಇದೊಂದು ಮಾತ್ರ ಸಾಧ್ಯವಾಗಿಲ್ಲ ಎನ್ನುವ ಕೊರಗು ಎಂದಿಗೂ ಕಾಡುವುದು ನಿಜ ಎಂದು ಮೆಸ್ಸಿ ಹೇಳಿದರು.