ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ (Wrestling Body Chief) ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಎರಡು ಎಫ್ಐಆರ್ ದಾಖಲು ಮಾಡಿದ್ದಾರೆ. ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಬಾಲಕಿಯೊಬ್ಬಳೂ ದೂರು ನೀಡಿದ್ದ ಕಾರಣ, ಅವರ ವಿರುದ್ಧ ಪೋಕ್ಸೊ ಮತ್ತು ಐಪಿಸಿ ಸೆಕ್ಷನ್ನ ವಿವಿಧ ಕಾಯ್ದೆಗಳಡಿ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಅದರ ಬೆನ್ನಲ್ಲೇ ಬ್ರಿಜ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದ ಗೊಂಡಾಕ್ಕೆ ಭೇಟಿ ನೀಡಿದ್ದು, ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಲೈಂಗಿಕ ದೌರ್ಜನ್ಯದ ಕೇಸ್ನಲ್ಲಿ ಆರೋಪಿಯಾಗಿರುವ ಅವರನ್ನು ಗೊಂಡಾದಲ್ಲಿರುವ ಅವರ ಬೆಂಬಲಿಗರು ಹಾರ-ತುರಾಯಿ ಹಾಕಿ ಸ್ವಾಗತಿಸಿದ್ದಾರೆ. ಈ ಏಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್ ಸಿಂಗ್, ‘ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರತಿ ನನ್ನವರೆಗೆ ತಲುಪಿಲ್ಲ. ಎಫ್ಐಆರ್ ಕಾಪಿ ನನಗೆ ಬಂದ ನಂತರವೇ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ.
‘ನಾನು ನಿಜಕ್ಕೂ ಅಮಾಯಕ. ಪೊಲೀಸರು/ತನಿಖಾ ದಳಗಳು ಮಾಡುವ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ನ್ಯಾಯಾಂಗದಲ್ಲಿ ನಂಬಿಕೆಯಿಟ್ಟಿದ್ದೇನೆ. ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸುತ್ತೇನೆ’ ಎಂದು ಹೇಳಿದ ಬ್ರಿಜ್ ಭೂಷಣ್ ಸಿಂಗ್ ‘ನನ್ನ ಸ್ಥಾನಕ್ಕೆ ರಾಜಿನಾಮೆ ಕೊಡುವುದು ನನಗೆ ಯಾವುದೇ ದೊಡ್ಡ ವಿಷಯವಲ್ಲ. ಆದರೆ ನಾನು ಕ್ರಿಮಿನಲ್ ಅಲ್ಲವೇ ಅಲ್ಲ, ಈಗ ನಾನು ರಾಜೀನಾಮೆ ಕೊಟ್ಟರೆ, ಕುಸ್ತಿಪಟುಗಳು ಮಾಡುತ್ತಿರುವ ಆರೋಪವನ್ನು ಒಪ್ಪಿಕೊಂಡಂತೆ ಆಗುತ್ತದೆ. ನನ್ನ ಆಡಳಿತದ ಅವಧಿ ಇನ್ನೇನು ಮುಗಿಯುವ ಹಂತದಲ್ಲಿದೆ. ಇನ್ನು 45ದಿನದಲ್ಲಿ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಅದು ಮಗಿಯುತ್ತಿದ್ದಂತೆ ನಾನು ನನ್ನ ಸ್ಥಾನದಿಂದ ಕೆಳಕ್ಕೆ ಇಳಿಯಲೇಬೇಕು. ನನ್ನ ವಿರುದ್ಧ ಎದ್ದಿರುವ ಆರೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರ ಮೂವರು ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ. ಅದರಲ್ಲಿ ಸತ್ಯ ಹೊರಬೀಳಲಿದೆ’ ಎಂದು ಹೇಳಿದರು.
ಪ್ರತಿಭಟನೆ ಕುಳಿತ ಕುಸ್ತಿಪಟುಗಳ ವಿರುದ್ಧವೇ ಆರೋಪ ಮಾಡಿದ ಬ್ರಿಜ್ ಭೂಷಣ್ ಸಿಂಗ್, ‘ಕುಸ್ತಿಪಟುಗಳು ಪ್ರತಿದಿನ ಹೊಸಹೊಸ ಬೇಡಿಕೆಗಳನ್ನು ಇಡುತ್ತಿದ್ದಾರೆ. ಅವರು ಮೊದಲು ನನ್ನ ರಾಜೀನಾಮೆಗೆ ಪಟ್ಟು ಹಿಡಿದರು. ನನ್ನ ಸಂಸದ ಸ್ಥಾನಕ್ಕೂ ರಾಜೀನಾಮೆ ಕೊಡಬೇಕು ಎಂದರು. ಈಗ ನನ್ನನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನಾನು ಸಂಸದನಾಗಿದ್ದು ಜನರಿಂದ ಹೊರತು, ವಿನೇಶ್ ಪೊಗಟ್ಳಿಂದಲ್ಲ. ಕೆಲವೇ ಮಂದಿ ಹೀಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಶೇ.90ರಷ್ಟು ಕುಸ್ತಿಪಟುಗಳು ನನ್ನೊಂದಿಗೆ ಇದ್ದಾರೆ’ ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ. ಅಷ್ಟೇ ಅಲ್ಲ, ಇವರು ಹೀಗೆ ಆಡುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ. ಒಬ್ಬ ಉದ್ಯಮಿ ಇವರೆಲ್ಲರ ಹಿಂದೆ ಇದ್ದಾನೆ. ಅದು ನನಗೆ ಗೊತ್ತು ಎಂದಿದ್ದಾರೆ. ಹಾಗಂತ ಉದ್ಯಮಿಯ ಹೆಸರನ್ನು ಹೇಳಿಲ್ಲ.
ಇದನ್ನೂ ಓದಿ: Wrestlers Protest: ಧರಣಿ ಕುಳಿತ ಕುಸ್ತಿಪಟುಗಳನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ; ಕರೆಂಟ್, ನೀರು ಇಲ್ಲದ ಸ್ಥಿತಿ
ಮೊದಲು ಮದುವೆಗೆ ಕರೆಯುತ್ತಿದ್ದರು!
ನನ್ನಿಂದ ಕಿರುಕುಳವಾಯಿತು ಎಂದು ಹೇಳುತ್ತಿರುವ ಕುಸ್ತಿಪಟುಗಳು ಕಳೆದ 12ವರ್ಷಗಳಿಂದಲೂ ಈ ಬಗ್ಗೆ ಮಾತನಾಡಿಲ್ಲ. 2012ರಿಂದಲೂ ನಾನು ಹಲವರಿಗೆ ಕಿರುಕುಳ ನೀಡಿದ್ದೇನೆ ಎಂದಿದ್ದಾರೆ. ಆದರೆ ಅಲ್ಲಿಂದ ಇಲ್ಲಿಯವರೆಗೆ ಯಾರೂ ಯಾವುದೇ ಪೊಲೀಸ್ ಸ್ಟೇಶನ್ನಲ್ಲಿ ದೂರು ದಾಖಲಿಸಿಲ್ಲ. ಕ್ರೀಡಾ ಸಚಿವಾಲಯಕ್ಕಾಗಲೀ, ಕುಸ್ತಿ ಒಕ್ಕೂಟಕ್ಕಾಗಲೀ ದೂರು ಕೊಟ್ಟಿಲ್ಲ. ಆಗೆಲ್ಲ ನನ್ನ ಹೊಗಳುತ್ತಿದ್ದರು. ತಮ್ಮ ಮದುವೆಗೆ ಕರೆಯುತ್ತಿದ್ದರು, ನನ್ನೊಂದಿಗೆ ಫೋಟೋ ತೆಗೆದುಕೊಳ್ಳುತ್ತಿದ್ದರು. ನನ್ನ ಆಶೀರ್ವಾದ ಪಡೆಯುತ್ತಿದ್ದರು ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದಲೂ ನನ್ನ ವಿರುದ್ಧ ಆರೋಪ ಮಾಡಿಕೊಂಡು ಬರಲಾಗುತ್ತಿದೆ. ಇದು ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಬೆಂಬಲಿಗರಿಗೆ ತುಂಬ ನೋವು ಕೊಟ್ಟಿದೆ. ಪಕ್ಷಪಾತವಿಲ್ಲದ ತನಿಖೆ ನಡೆಯಬೇಕು ಎಂದು ನಾನೂ ಬಯಸುತ್ತಿದ್ದೇನೆ. ನನ್ನ ವಿರುದ್ಧ ಆರೋಪ ಸಾಬೀತುಪಡಿಸಲು ಹೊಸಹೊಸ ಜನರನ್ನು ಕರೆದುಕೊಂಡು ಬರಲಾಗುತ್ತಿದೆ. ಸರ್ಕಾರದ ಮೇಲೆ ನನಗೆ ಗೌರವ ಇದೆ’ ಎಂದು ಹೇಳಿದ ಬ್ರಿಜ್ ಭೂಷಣ್ ಸಿಂಗ್ ‘ನಾನು ಕುಸ್ತಿ ಫೆಡರೇಶನ್ ಅಧ್ಯಕ್ಷ ಸ್ಥಾನ್ಕಕಾಗಲೀ, ಸಂಸದನ ಸ್ಥಾನಕ್ಕಾಗಲೀ ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ಅವರ ಹುಟ್ಟೂರು ಉತ್ತರ ಪ್ರದೇಶದ ಗೊಂಡಾ ಆಗಿದ್ದು, ಅವರು ಬಿಜೆಪಿ ಸಂಸದ. ಉತ್ತರ ಪ್ರದೇಶದ ಕೈಸರ್ಗಂಜ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.