Site icon Vistara News

Babar Azam: ಸೋಲಿನ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಕಣ್ಣೀರು ಹಾಕಿದ ಬಾಬರ್​ ಅಜಂ!

Babar Azam

ಕರಾಚಿ: ಅಫಘಾನಿಸ್ತಾನ ವಿರುದ್ಧದ ಸೋಲಿನ ಹತಾಶೆಯಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ಡ್ರೆಸ್ಸಿಂಗ್ ರೂಮ್​ನಲ್ಲಿ ಕಣ್ಣೀರು ಹಾಕಿದ್ದಾರೆ ಎಂದು ಪಾಕ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಯೂಸುಫ್(Mohammad Yousuf) ಹೇಳಿದ್ದಾರೆ.

ಪಾಕಿಸ್ತಾನದ ಸಾಮಾ ಟಿವಿಯಲ್ಲಿ ಸಂದರ್ಶನದಲ್ಲಿ ಮಾತನಾಡಿದ ಯೂಸುಫ್, “ಆಫ್ಘನ್​ ವಿರುದ್ಧದ ಸೋಲಿನ ಬಳಿಕ ಬಾಬರ್​ ಅವರು ಪಾಲ್ಗೊಂಡ ಪತ್ರಿಕಾಗೋಷ್ಠಿಯನ್ನು ನಾನು ನೋಡಿದೆ. ಅವರು ಇಲ್ಲಿ ವಿಚಲಿತರಾಗಿ ಕಾಣುತ್ತಿದ್ದರು. ಇದಕ್ಕೆ ಕಾರಣ ಹ್ಯಾಟ್ರಿಕ್​ ಸೋಲು. ಅಲ್ಲದೆ ಬಾಬರ್ ಅವರು ಡ್ರೆಸ್ಸಿಂಗ್ ​ರೂಮ್​ನಲ್ಲಿ ಕಣ್ಣೀರು ಸುರಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಇದು ತಂಡದ ಸೋಲಿನಲ್ಲಿ ಕೇವಲ ಬಾಬರ್‌ ಅವರ ತಪ್ಪಲ್ಲ. ಇದು ಇಡೀ ತಂಡವನ್ನು ಒಳಗೊಂಡಿರುತ್ತದೆ. ಕಷ್ಟದ ಸಮಯದಲ್ಲಿ ನಾವು ಬಾಬರ್‌ನೊಂದಿಗೆ ಇದ್ದೇವೆ ಮತ್ತು ಇಡೀ ದೇಶವು ಅವರೊಂದಿಗಿದೆ” ಎಂದು ಯೂಸುಫ್ ಹೇಳಿದರು.

“ಈ ಹಿಂದೆ ನಾನು ನಾಯಕನಾಗಿದ್ದಾಗ ಅಥವಾ ಇಂಜಮಾಮ್ ನಾಯಕನಾಗಿರುವಾಗ ನಾವು ಏಕೆ ಇತರ ತಂಡದ ಆಟಗಾರರಂತೆ ಡೈವ್​ ಹಾರಿ ಫೀಲ್ಡಿಂಗ್​ ನಡೆಸುತ್ತಿಲ್ಲ ಎಂದು ನಾಚಿಕೆ ಪಡುತ್ತಿದ್ದೆವು. ನಾಯಕನಾಗಿ ಏಷ್ಟೇ ಉತ್ತಮವಾಗಿ ಆಡಿದರೂ ಪಂದ್ಯ ಸೋತಾಗ ಆತನ ಪ್ರದರ್ಶನವನ್ನು ಯಾರು ಗುರುತಿಸುವುದಿಲ್ಲ,. ಬದಲಾಗಿ ಸೋಲನ್ನು ಆತನ ತಲೆಗೆ ಕಟ್ಟುತ್ತಾರೆ. ಇದು ಎಲ್ಲ ತಂಡದಲ್ಲಿರುವ ಸಮಸ್ಯೆಯಾಗಿದೆ. ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಆಗಿದ್ದನ್ನು ಮರೆತು ಮುಂದಿನ ಪಂದ್ಯದ ಕಡೆ ಗಮನ ಹರಿಸಿ” ಎಂದು ಬಾಬರ್​ಗೆ ಯೂಸುಫ್ ಧೈರ್ಯ ತುಂಬಿದ್ದಾರೆ.

ಶಾಹಿದ್ ಅಫ್ರಿದಿ ಆಕ್ರೋಶ

ಇದೇ ಕಾರ್ಯಕ್ರಮದ ಭಾಗವಾಗಿದ್ದ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಬಾಬರ್​ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. “ಬಾಬರ್​ ಅವರಲ್ಲಿ ನಾಯಕತ್ವದ ಗುಣ ಎಲ್ಲಿಯೂ ಕಾಣುತ್ತಿಲ್ಲ. ಅವರಿಗೆ ತಂಡದ ಉತ್ಸಾಹvನ್ನು ಹೆಚ್ಚಸುವ ಕಲೆ ತಿಳಿದಿಲ್ಲ. ಒಂದೆರಡು ಪಂದ್ಯ ಸೋತಾಗ ಅವರನ್ನು ಮುಂದಿನ ಪಂದ್ಯಕ್ಕೆ ಆಟಗಾರರನ್ನು ಹೇಗೆ ಹುರಿದುಂಬಿಸಬೇಕು ಎಂಬ ವಿಚಾರದ ಬಗ್ಗೆ ಅವರು ಚಿಂತಿಸುತ್ತಿಲ್ಲ. ಅಲ್ಲದೆ ಮೈದಾನದಲ್ಲಿಯೂ ಅವರು ಓರ್ವ ಬೌಲರ್​ ರನ್​ ನೀಡುತ್ತಿದ್ದಾಗ ಆತನಿಗೆ ಯಾವಿದೇ ಸಲಹೆ ನೀಡದೆ ದೂರದಲ್ಲೇ ಸಪ್ಪೆ ಮೋರೆ ಮಾಡಿ ನಿಂತರೆ ಪ್ರಯೋಜನವಿಲ್ಲ. ಕನಿಷ್ಠ ಪಕ್ಷ ಇತರ ತಂಡದ ನಾಯಕರು ಏನು ಗೇಮ್​ ಪ್ಲ್ಯಾನ್​ ಮಾಡುತ್ತಾರೆ ಎಂಬುದನ್ನು ನೋಡಿ ಕಲಿಯುವ ಗುಣವೂ ಅವರಲಿಲ್ಲ. ಅವರು ನಾಯಕನ ಸ್ಥಾನಕ್ಕೆ ನಾಲಾಯಕು” ಎಂದು ಹೇಳಿದರು.

ಇದನ್ನೂ ಓದಿ AFG vs PAK: ಪಾಕ್​​ ಪರಾಭವ; ಗುಂಡಿನ ಸುರಿಮಳೆಗೈದು ಸಂಭ್ರಮಿಸಿದ ಕಾಬೂಲ್​ ಜನತೆ

ನಾಯಕತ್ವ ಕಳೆದುಕೊಳ್ಳುವ ಭೀತಿ

ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್​ನಲ್ಲಿ(ICC World Cup 2023) ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವುತ್ತಿರುವ ಕಾರಣ ತಂಡದ ನಾಯಕ ಬಾಬರ್​ ಅಜಂ(Babar Azam) ಅವರನ್ನು ಈ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ದುರ್ಬಲ ಅಫಘಾನಿಸ್ತಾನ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡ ಬಳಿಕ ಬಾಬರ್​ ಮತ್ತು ತಂಡದ ವಿರುದ್ಧ ಪಾಕಿಸ್ತಾನದ ಮಾಜಿ ಆಟಗಾರರು ಬಹಿರಂಗವಾಗಿಯೇ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ವಾಸಿಂ ಅಕ್ರಮ್​ ಅವರಂತೂ ನೇರ ಪ್ರಸಾರದಲ್ಲೇ ಪಾಕಿಸ್ತಾನ ಆಟಗಾರರು ನಿತ್ಯ 8 ಕೆಜಿ ಮಟನ್​ ತಿಂದರೆ ಇದೇ ಗತಿ ಎದುರಾಗುತ್ತದೆ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದರು. ಇದೀಗ ಬಾಬರ್​ ಅವರು ನಾಯಕತ್ವದಿಂದ ಕೆಳಗಿಳಿಯುವ ಸುದ್ದಿಯೊಂದು ಹೊರಬಿದ್ದಿದೆ.

ಸದ್ಯದ ಮಾಹಿತಿ ಪ್ರಕಾರ ವಿಶ್ವಕಪ್​ ಟೂರ್ನಿಯ ಬಳಿಕ ಬಾಬರ್ ಅಜಂ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಬಾಬರ್​ ನಾಯಕತ್ವದಲ್ಲಿ ಪಾಕ್​ ವಿಶ್ವಕಪ್ ಗೆದ್ದರೆ ಅವರೇ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಸೋತು ಟೂರ್ನಿಯಿಂದ ಹೊರಬಿದ್ದರೆ ಅವರ ನಾಯಕತ್ವದ ಪಟ್ಟ ಕಳೆದುಕೊಳ್ಳುವುದು ಖಚಿತ ಎನ್ನಲಾಗಿದೆ.

Exit mobile version