Site icon Vistara News

Rahul Dravid: ಮೊದಲ ಟೆಸ್ಟ್​ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಕೋಚ್​ ದ್ರಾವಿಡ್​

India head coach Rahul Dravid

ಹೈದರಾಬಾದ್​: ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಸೋಲಿಗೆ ಟೀಮ್​ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಪ್ರಮುಖ ಕಾರಣ ತಿಳಿಸಿದ್ದಾರೆ. ಮೊದಲ ಇನಿಂಗ್ಸ್​ನ ಬ್ಯಾಟಿಂಗ್​ನಲ್ಲಿ ರನ್​ ಕೊರತೆಯಾದದ್ದೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್​, ಮೊದಲ ಇನಿಂಗ್ಸ್ ನಲ್ಲಿ 70 ರಿಂದ 80 ರನ್ ಕಡಿಮೆ ಗಳಿಸಿದ್ದೇ ಸೋಲಿಗೆ ಕಾರಣವಾಯಿತು. ಜತೆಗೆ ದ್ವಿತೀಯ ಇನಿಂಗ್ಸ್​ನಲ್ಲಿಯೂ ನಮ್ಮ ಬ್ಯಾಟರ್​ಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ತಂಡದ ಪರ ಮೂವರು ಆಟಗಾರರು 80 ರನ್​ ಗಡಿಯಲ್ಲಿ ವಿಕೆಟ್​ ಕೈಚೆಲ್ಲಿದರು. ಯಾರು ಕೂಡ ಶತಕ ಗಳಿಸಲು ಯಶಸ್ವಿಯಾಗಲಿಲ್ಲ. ಮೂವರ ಪೈಕಿ ಕನಿಷ್ಠ ಇಬ್ಬರು ಶತಕ ಬಾರಿಸುತ್ತಿದ್ದರೂ ಮೊದಲ ಇನಿಂಗ್ಸ್​ನಲ್ಲಿ ಹೆಚ್ಚಿನ ಲೀಡ್​ ಪಡೆಯಬಹುದಿತ್ತು. ಆರಂಭಿಕ ರನ್​ ಕೊರತೆಯೇ ಸೋಲಿಗೆ ಕಾರಣ ಎಂದು ದ್ರಾವಿಡ್​ ಹೇಳಿದರು.

ದ್ವಿತೀಯ ಇನಿಂಗ್ಸ್​ನಲ್ಲಿ ನಮ್ಮ ಬೌಲರ್​ಗಳು ಆರಂಭಿಕ ಹಿಡಿತ ಸಾಧಿಸಿದರೂ ಕೂಡ ಓಲಿ ಪೋಪ್​ ವಿಕೆಟ್​ ಕೀಳುವಲ್ಲಿ ವಿಫಲರಾದದ್ದು ಕೂಡ ತಂಡದ ಹಿನ್ನಡೆಗೆ ಕಾರಣವಾಯಿತು. ತಂಡವೊಂದು ಗಳಿಸುವ ಮೊತ್ತವನ್ನು ಅವರು ಏಕಾಂಗಿಯಾಗಿ ದಾಖಲಿಸಿದರು. ಮುಂದಿನ ಪಂದ್ಯದಲ್ಲಿ ಈ ತಪ್ಪುಗಳನ್ನು ತಿದ್ದಿಕೊಂಡು ನಮ್ಮ ತಂಡ ಮತ್ತೆ ಗೆಲುವಿನ ಹಳಿ ಏರುವ ವಿಶ್ವಾಸವಿದೆ ಎಂದು ದ್ರಾವಿಡ್​ ತಂಡಕ್ಕೆ ಆತ್ಮವಿಶ್ವಾ ತುಂಬುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ IND vs ENG: ಪಂತ್ ಇದ್ದಿದ್ದರೆ ಭಾರತ ತಂಡ ಸೋಲುತ್ತಿರಲಿಲ್ಲ ಎಂದ ಅಭಿಮಾನಿಗಳು

ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯ ಕಂಡ ಈ ಪಂದ್ಯದಲ್ಲಿ 6 ವಿಕೆಟ್‌ ನಷ್ಟಕ್ಕೆ 316 ರನ್‌ ಗಳಿಸಿದ್ದಲ್ಲಿಂದ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್​ ತಂಡ 102.1 ಓವರ್​ ಬ್ಯಾಟಿಂಗ್​ ನಡೆಸಿ 420 ರನ್​ಗೆ ಆಲೌಟ್​ ಆಗುವ ಮೂಲಕ ಭಾರತಕ್ಕೆ 231 ರನ್​ಗಳ ಗೆಲುವಿನ ಗುರಿ ನೀಡಿತು.

ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಭಾರತಕ್ಕೆ ಆಂಗ್ಲರು ಸ್ಪಿನ್​ ಅಸ್ತ್ರದ ಮೂಲಕ ಶಾಕ್​ ನೀಡಿದರು. ಪಂದ್ಯವನ್ನು 28 ರನ್​ಗಳಿಂದ ಗೆದ್ದು ಬೀಗಿದರು. ಭಾರತ 202 ರನ್​ಗೆ ಸರ್ವಪತನ ಕಂಡಿತು. ಉತ್ಕೃಷ್ಟ ಮಟ್ಟದ ಸ್ಪಿನ್​ ದಾಳಿ ನಡೆಸಿದ ಟಾಮ್ ಹಾರ್ಟ್ಲಿ 26.2 ಓವರ್​ ಎಸೆದು ಕೇವಲ 62 ರನ್​ ಬಿಟ್ಟುಕೊಟ್ಟು ಭಾರತದ ಕುಸಿತಕ್ಕೆ ಕಾರಣರಾದರು. ಒಟ್ಟು 7 ವಿಕೆಟ್​ ಕಿತ್ತು ಮಿಂಚಿದರು. ಇವರ ಸ್ನಿನ್​ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಭಾರತೀಯ ಬ್ಯಾಟರ್​ಗಳು ತರಗೆಲೆಯಂತೆ ಉದುರಿ ಹೋದರು. ಈ ಸೋಲಿನಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿಯೂ(WTC Points Table) ಭಾರತ ಮೂರು ಸ್ಥಾನಗಳ ಕುಸಿತ ಕಂಡಿದೆ. 2ನೇ ಸ್ಥಾನದಲ್ಲಿದ್ದ ಭಾರತ ಇದೀಗ ನೂತನ ಅಂಕಪಟ್ಟಿಯಲ್ಲಿ ಮೂರು ಸ್ಥಾನಗಳ ಕುಸಿತ ಕಂಡು 5ನೇ ಸ್ಥಾನಕ್ಕೆ ಜಾರಿದೆ. ಗೆಲುವು ದಾಖಲಿಸಿದ ಇಂಗ್ಲೆಂಡ್​ 21 ಪಾಯಿಂಟ್ಸ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. 

Exit mobile version