Site icon Vistara News

IND vs BAN: ಕೊಹ್ಲಿಯನ್ನು ಕೆಣಕಿದರೆ ಸೋಲು ಖಚಿತ; ಮುಷ್ಫಿಕರ್‌ ರಹೀಂ

mushfiqur rahim virat kohli

ಪುಣೆ: ಬಾಂಗ್ಲಾದೇಶ(IND vs BAN) ತಂಡ ಇಂದು(ಗುರುವಾರ) ನಡೆಯುವ ವಿಶ್ವಕಪ್​ ಪಂದ್ಯದಲ್ಲಿ ಭಾರತ ತಂಡದ ಸವಾಲು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ತಂಡದ ಸಹ ಆಟಗಾರರಿಗೆ ಹಿರಿಯ ಆಟಗಾರ ಮುಷ್ಫಿಕರ್‌ ರಹೀಂ(Mushfiqur Rahim) ಸಲಹೆಯೊಂದನ್ನು ನೀಡಿದ್ದಾರೆ. ವಿರಾಟ್​ ಕೊಹ್ಲಿಯನ್ನು(virat kohli) ತಪ್ಪಿಯೂ ಯಾರು ಕೂಡ ಕೆಣಕಬಾರದು, ಕೆಣಕಿದರೆ ನಮಗೆ ಅಪಾಯ ಎಂದು ಕಿವಿ ಮಾತು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ವೀರಾವೇಶ

ಸ್ಟಾರ್​ ಸ್ಪೋರ್ಟ್ಸ್​ ಸಂದರ್ಶನದಲ್ಲಿ ಮಾತನಾಡಿದ ಮುಷ್ಫಿಕರ್‌, “ವಿರಾಟ್ ಅವರನ್ನು​ ಯಾವುದೇ ಕಾರಣಕ್ಕೂ ಸ್ಲೆಡ್ಜ್‌ ಮಾಡಿ ಕೆಣಕುವುದಕ್ಕೆ ನಾವು ಕೈ ಹಾಕುವುದಿಲ್ಲ. ಒಂದೊಮ್ಮೆ ಸ್ಲೆಡ್ಜ್‌ ಮಾಡಿದರೆ ಕೊಹ್ಲಿ ವೀರಾವೇಶ ತಾಳುತ್ತಾರೆ. ಇದನ್ನೂ ನಾವು ಈಗಾಗಲೇ ಕಂಡಿದ್ದೇವೆ. ಹೀಗಾಗಿ ನಮ್ಮ ಬೌಲರ್​ಗಳಲ್ಲಿ ನಾನು ವಿನಂತಿ ಮಾಡುವುದೇನೆಂದರೆ ದಯವಿಟ್ಟು ಕೊಹ್ಲಿಯನ್ನು ಮಾತ್ರ ಕೆಣಕದಿರಿ” ಎಂದು ಕೇಳಿಕೊಳ್ಳುವುದಾಗಿ ಹೇಳಿದರು.

ಕೊಹ್ಲಿಗೆ ಸ್ಲೆಡ್ಜಿಂಗ್ ಎಂದರೆ ಇಷ್ಟ. ಅವರನ್ನು ಸ್ಲೆಡ್ಜ್ ಮಾಡಿದಷ್ಟೂ ಉತ್ತಮವಾಗಿ ಬ್ಯಾಟಿಂಗ್​ ಪ್ರದರ್ಶನ ತೋರುತ್ತಾರೆ. ಇದು ಈಗಾಗಲೇ ವಿಶ್ವದ ಎಲ್ಲ ತಂಡದ ಬೌಲರ್​ ಮತ್ತು ನಾಯಕರಿಗೂ ತಿಳಿದಿರುವ ವಿಚಾರ. ಅನಗತ್ಯವಾಗಿ ಅವರನ್ನು ಕೆಣಕಿದರೆ ಗೆಲ್ಲುವ ಪಂದ್ಯವನ್ನು ಸೋಲುವಂತಾಗಬಹುದು. ಹೀಗಾಗಿ ಕೊಹ್ಲಿಯನ್ನು ಶಾಂತವಾಗಿ ಆಡಲು ಬಿಡಬೇಕು. ಆಗ ಅವರ ವಿಕೆಟ್​ ಪಡೆಯುವುದು ಸುಲಭ ಎಂದು ಮುಷ್ಫಿಕರ್‌ ರಹೀಂ ಅಭಿಪ್ರಾಯಪಟ್ಟರು. ವಿರಾಟ್‌ ಕೊಹ್ಲಿ ಬಾಂಗ್ಲಾದೇಶ ಎದುರು ಈವರೆಗೆ ಆಡಿರುವ 26 ಪಂದ್ಯಗಳನ್ನು ಆಡಿದ್ದು 65.31ರ ಸರಾಸರಿಯಲ್ಲಿ 1437 ರನ್‌ ಬಾರಿಸಿದ್ದಾರೆ.

ಕೊನೆಯ ವಿಶ್ವಕಪ್​

36 ವರ್ಷದ ಮುಷ್ಫಿಕರ್‌ ರಹೀಂ ಅವರಿಗೆ ಇದು ಕೊನೆಯ ವಿಶ್ವಕಪ್​ ಟೂರ್ನಿಯಾಗಿದೆ. ಇದುವರೆಗೆ ಬಾಂಗ್ಲಾ ಪರ 259 ಏಕದಿನ ಪಂದ್ಯಗಳನ್ನು ಆಡಿರುವ ಅವರು 7,525 ರನ್​ ಗಳಿಸಿದ್ದಾರೆ. 144 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 9 ಶತಕ ಮತ್ತು 48 ಅರ್ಧಶತಕ ಒಳಗೊಂಡಿದೆ. 86 ಟೆಸ್ಟ್​ ಪಂದ್ಯಗಳನ್ನು ಆಡಿ 5553 ರನ್​ ಬಾರಿಸಿದ್ದಾರೆ. 102 ಟಿ20 ಪಂದ್ಯಗಳಿಂದ 1500 ರನ್​ ಕಲೆ ಹಾಕಿದ್ದಾರೆ.

ಇದನ್ನೂ ಓದಿ IND vs BAN: ಭಾರತ-ಬಾಂಗ್ಲಾ ಪಂದ್ಯಕ್ಕೆ ಮಳೆ ಕಾಟ ಇದೆಯೇ?

ದ್ರಾವಿಡ್​ ಜತೆ ಆಡಿದ್ದ ಮುಷ್ಫಿಕರ್‌ ರಹೀಂ

2007ರ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ ಸೋಲು ಕಂಡಾಗ ಮುಷ್ಫಿಕರ್‌ ರಹೀಂ ಅವರು ತಂಡದಲ್ಲಿದ್ದರು. ಅವರು ಆ ಪಂದ್ಯದಲ್ಲಿ ಅಜೇಯ 56 ರನ್​ ಬಾರಿಸಿ ಬಾಂಗ್ಲಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯ ಭಾರತ ಮತ್ತು ಬಾಂಗ್ಲಾ ನಡುವಣ ಮೊದಲ ವಿಶ್ವಕಪ್​ ಮುಖಾಮುಖಿಯಾಗಿತ್ತು. ಭಾರತ 5 ವಿಕಟ್​ಗಳ ಸೋಲು ಕಂಡು ಲೀಗ್​ನಿಂದ ಹೊರಬಿದ್ದಿತ್ತು. ಆಗ ರಾಹುಲ್ ದ್ರಾವಿಡ್​ ಅವರು ಭಾರತ ತಂಡದ ನಾಯಕರಾಗಿದ್ದರು. ಸ್ವಾರಸ್ಯವೆಂದರೆ ಈಗ ದ್ರಾವಿಡ್​ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದಾರೆ. ಅಂದು ದ್ರಾವಿಡ್​ ಎದುರು ಆಡಿದ್ದ ಮುಷ್ಫಿಕರ್‌ ರಹೀಂ ಇನ್ನೂ ಕೂಡ ತಂಡದಲ್ಲಿದ್ದಾರೆ.

ಸಂಭಾವ್ಯ ತಂಡಗಳು

ಭಾರತ: ರೋಹಿತ್​ ಶರ್ಮ, ಇಶಾನ್​ ಕಿಶನ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್​/ ಮೊಹಮ್ಮದ್​ ಶಮಿ, ಜಸ್​ಪ್ರೀತ್​ ಬುಮ್ರಾ, ಶಾರ್ದೂಲ್​ ಠಾಕೂರ್, ಕುಲ್​ದೀಪ್​ ಯಾದವ್​.

ಬಾಂಗ್ಲಾದೇಶ: ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್.

Exit mobile version