Site icon Vistara News

Dutee Chand: ಸಲಿಂಗ ವಿವಾಹದ ಸುಪ್ರೀಂ ಕೋರ್ಟ್‌ ತೀರ್ಪಿಗೆ ಖ್ಯಾತ ಅಥ್ಲೀಟ್‌ ಬೇಸರ

Indian sprinter Dutee Chand

ನವದೆಹಲಿ: ಭಾರತದ ಸ್ಟಾರ್‌ ಸ್ಪ್ರಿಂಟರ್‌ ದ್ಯುತಿ ಚಂದ್‌(Dutee Chand) ಅವರು ಸುಪ್ರೀಂ ಕೋರ್ಟ್‌(supreme court) ಸಲಿಂಗ ವಿವಾಹದ ಕುರಿತಾಗಿ ನೀಡಿದ ಮಹತ್ವದ ತೀರ್ಪುನ(Same Sex Marriage verdict) ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಅಂದರೆ ಮಂಗಳವಾರ ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹಕ್ಕೆ(Same Sex Marriage) ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನಿರಾಕರಿಸಿತ್ತು. ಇದೇ ವಿಚಾರವಾಗಿ ದ್ಯುತಿ ಚಂದ್‌ ಈ ತೀರ್ಪಿನಿಂದ ಮದುವೆಯಾಗುವ ಎಲ್ಲ ಯೋಜನೆ ವಿಫಲಗೊಂಡಿದೆ ಎಂದಿದ್ದಾರೆ.

ದ್ಯುತಿ ಚಂದ್‌ ಮತ್ತು ಅವರ ಬಹು ಕಾಲದ ಗೆಳತಿ ಮೋನಾಲಿಸಾ ಇಬ್ಬರು ಸಲಿಂಗ ವಿವಾಹವಾಗಲು ನಿರ್ಧರಿಸಿದ್ದರು. ಅಲ್ಲದೆ ಕಳೆದ 5 ವರ್ಷಗಳಿಂದ ಇಬ್ಬರು ಜತೆಯಾಗಿ ಜೀವಿಸುತ್ತಿದ್ದರು. ಇದೇ ವರ್ಷ ವಿವಾಹವಾಗುವ ಯೋಜನೆ ಹಾಕಿಕೊಂಡಿದ್ದರು. ಆದರೆ ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಇದರಿಂದ ತನ್ನ ಮದುವೆಯ ಯೋಜನೆ ವಿಫಲಗೊಂಡಿದೆ ಎಂದು ಬೇಸರ ಹೊರಹಾಕಿದ್ದಾರೆ.


2019ರ ಮೇ ತಿಂಗಳಲ್ಲಿ ದ್ಯತಿ ಚಂದ್​ ಅವರು ತಮ್ಮ ಸಲಿಂಗಿ ಪ್ರೇಮದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು. ಈ ಮೂಲಕ ದೇಶದ ಮೊದಲ ಲೆಸ್ಬಿಯನ್‌ ಅಥ್ಲೀಟ್‌ ಆಗಿ ದ್ಯುತಿ ಚಂದ್‌ ಗುರುತಿಸಿಕೊಂಡರು. ಇದೇ ವಿಚಾರವಾಗಿ ಅವರು ದೊಡ್ಡ ಮಟ್ಟದ ಟೀಕೆ ಎದುರಿಸಿದ್ದರು. ಆದರೆ ಯಾವುದಕ್ಕೂ ಕಿವಿಗೊಡದೆ ತಮ್ಮ ಸಲಿಂಗಿ ಪ್ರೇಮವನ್ನು ಮುಂದುವರಿಸಿದ್ದರು.

ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ಸಲಿಂಗ ವಿವಾಹ ಅಮಾನ್ಯ ತೀರ್ಪು ಸ್ವಾಗತಾರ್ಹ, ಸರ್ಕಾರಕ್ಕೂ ಆತುರ ಬೇಡ


ಎಲ್ಲೆಲ್ಲಿ ಕಾನೂನುಬದ್ಧ?

ಜಗತ್ತಿನ 195 ದೇಶಗಳಲ್ಲಿ 29 ದೇಶಗಳಲ್ಲಿ ಮಾತ್ರ ಸಲಿಂಗ ವಿವಾಹವನ್ನು ಇದುವರೆಗೂ ಕಾನೂನಾತ್ಮಕವಾಗಿ ಮಾನ್ಯ ಮಾಡಲಾಗಿದೆ. ಮೊತ್ತಮೊದಲು ಇದಕ್ಕೆ ಮಾನ್ಯತೆ ನೀಡಿದ ದೇಶ ನೆದರ್‌ಲ್ಯಾಂಡ್‌ (2001). ನಂತರ ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಬೆಲ್ಜಿಯಂ, ಸ್ಪೇನ್‌, ಕೆನಡಾ, ಆಸ್ಟ್ರೇಲಿಯಾ ಮುಂತಾದ 29 ದೇಶಗಳು ಮಾನ್ಯ ಮಾಡಿವೆ. ಆದರೆ ಭಾರತ, ಚೀನಾ ಮುಂತಾದ ಸಾಂಪ್ರದಾಯಿಕ ಹಿನ್ನೆಲೆಯ ದೇಶಗಳು, ಸೌದಿ ಅರೇಬಿಯಾ ಮುಂತಾದ ಇಸ್ಲಾಮಿಕ್‌ ಪ್ರಾಬಲ್ಯದ ರಾಷ್ಟ್ರಗಳು, ಇನ್ನೂ ಮಾನ್ಯತೆ ನೀಡಿಲ್ಲ. ಎಲ್ಲ ದೇಶಗಳಲ್ಲಿ ಇದನ್ನು ಧಾರ್ಮಿಕ ಗುರುಗಳು, ಮಠ ಮಾನ್ಯಗಳು ವಿರೋಧಿಸಿವೆ.


ನಾಲ್ಕು ವರ್ಷಗಳ ಕಾಲ ನಿಷೇಧ

ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಅತ್ಯಂತ ವೇಗದ ಓಟಗಾರ್ತಿ ದ್ಯುತಿ ಚಂದ್ ಅವರಿಗೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ದ್ಯುತಿ ಚಾಂದ್ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದಾರೆ. 2021 ರ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 4 ರ ಸಮಯದಲ್ಲಿ 11.17 ಸೆಕೆಂಡ್‌ಗಳಲ್ಲಿ 100 ಮೀ ಓಡಿ ದ್ಯುತಿ ಹೊಸ ಭಾರತೀಯ ಮಹಿಳಾ ದಾಖಲೆಯನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ Dutee Chand: ಡೋಪಿಂಗ್‌ ಟೆಸ್ಟ್‌ನಲ್ಲಿ ಸೋತ ದ್ಯುತಿ ಚಂದ್‌ ಕ್ಯಾನ್ಸರ್‌ ವಿರುದ್ಧ ಗೆದ್ದರು; ಇಲ್ಲಿದೆ ಕರುಣಾಜನಕ ಕತೆ

ಈ ನಿಷೇಧವು ಜನವರಿ 3, 2023 ರಿಂದ ಪ್ರಾರಂಭವಾಗುತ್ತದೆ. ಅಲ್ಲದೆ ಸ್ಯಾಂಪಲ್ ಸಂಗ್ರಹಣೆಯ ದಿನಾಂಕದಿಂದ (ಡಿಸೆಂಬರ್ 5, 2022) ಅವರು ಪಡೆದ ಎಲ್ಲ ಸ್ಪರ್ಧಾತ್ಮಕ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ. ಕಳೆದ ವರ್ಷ ಡಿಸೆಂಬರ್‌ 5ರಂದು ಭುವನೇಶ್ವರದಲ್ಲಿ ದ್ಯುತಿ ಅವರಿಂದ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ ನಿಷೇಧಿತ ಅಂಶ ಇರುವುದು ಪತ್ತೆಯಾಗಿತ್ತು. ದ್ಯುತಿ ಅವರು ಸ್ನಾಯು ಮತ್ತು ಮೂಳೆಗಳ ಬಲವರ್ಧನೆಗಾಗಿ ಈ ಪದಾರ್ಥವನ್ನು ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ಪತ್ರವೊಂದನ್ನು ಬರೆದು ಎಚ್ಚರಿಕೆಯನ್ನು ನೀಡಿ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಇಲ್ಲಿಯೂ ಅವರು ವಿಫಲವಾದ ಕಾರ 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿ ಈಗ ಕ್ರೀಡಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಅವರಿಗೆ ಇದೇ ವರ್ಷದ ಆಗಸ್ಟ್​ ತಿಂಗಳಿನಲ್ಲಿ ನಿಷೇಧ ಶಿಕ್ಷೆ ಪ್ರಕಟಿಸಲಾಗಿತ್ತು.

Exit mobile version