Site icon Vistara News

IND vs PAK: ಭಾರತ-ಪಾಕ್​ ಸೆಮಿಫೈನಲ್​ ಪಂದ್ಯಕ್ಕಿಂತ ದೊಡ್ಡ ಪಂದ್ಯ ಇನ್ನೊಂದಿಲ್ಲ; ಗಂಗೂಲಿ​ ವಿಶ್ವಾಸ

Sourav Ganguly

ಕೋಲ್ಕೊತಾ: ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳು ಈ ಬಾರಿ ವಿಶ್ವಕಪ್​ ಟೂರ್ನಿಯ ಸೆಮಿಫೈನಲ್(world cup semi final 2023)​ನಲ್ಲಿ ಮುಖಾಮುಖಿಯಾಗಬೇಕೆಂದು ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ(Sourav Ganguly) ಅವರು ​ಬಯಕೆ ವ್ಯಕ್ತಪಡಿಸಿದ್ದಾರೆ.

“ವಿಶ್ವಕಪ್​ ಕುರಿತ ಸ್ಪೋರ್ಟ್ಸ್ ತಕ್‌ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಗಂಗೂಲಿ ಅವರು ಈ ಬಯಕೆ ವ್ಯಕ್ತಪಡಿಸಿದರು.” ಪಾಕಿಸ್ತಾನ ಸೆಮಿಫೈನಲ್ ತಲುಪಬೇಕು. ಅಲ್ಲದೆ ಭಾರತದ ವಿರುದ್ಧ ಆಡಬೇಕೆಂದು ನಾನು ಬಯಸುತ್ತೇನೆ. ಇತ್ತಂಡಗಳ ಮಧ್ಯೆ ನಡೆಯುವ ಸೆಮಿಫೈನಲ್​ಗಿಂತ ದೊಡ್ಡ ಪಂದ್ಯ ಮತ್ತೊಂದಿಲ್ಲ. ನಡೆಯಲು ಸಾಧ್ಯವೂ ಇಲ್ಲ” ಎಂದು ಗಂಗೂಲಿ ಹೇಳಿದ್ದಾರೆ.

ಕೋಲ್ಕೊತಾದಲ್ಲಿ ಪಂದ್ಯ

ಭಾರತ ತಂಡದ ಸೆಮಿಫೈನಲ್​ ತಾಣ ಈಗಾಗಲೇ ನಿಗದಿಯಾಗಿದೆ. ಆದರೆ ಎದುರಾಳಿ ಮಾತ್ರ ಇನ್ನಷ್ಟೆ ನಿಗದಿಯಾಗಬೇಕಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಭಾರತ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನವೆಂಬರ್​ 15ರಂದು ಪಂದ್ಯ ಆಡಬೇಕಿದೆ. ಆದರೆ ಇದೀಗ ಪಾಕಿಸ್ತಾನ ತಂಡ ಎದುರಾದರೆ ಈ ಪಂದ್ಯದ ಸ್ಥಳ ಬದಲಾಗುವ ಸಾಧ್ಯತೆ ಅಧಿಕ ಎಂದು ವರದಿಯಾಗಿದೆ.

ಒಂದೊಮ್ಮೆ ಭಾರತಕ್ಕೆ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ಅಥವಾ ನ್ಯೂಜಿಲ್ಯಾಂಡ್​ ಎದುರಾಳಿಯಾದರೆ, ಆಗ ಭಾರತ ವಾಂಖೆಡೆ ಸ್ಟೇಡಿಯಂನಲ್ಲೇ ಪಂದ್ಯ ಆಡಲಿದೆ. ಪಾಕಿಸ್ತಾನ ಎದುರಾದರೆ ತಾಣವನ್ನು ಬದಲಿಸಿ ಭಾರತ ಈ ಪಂದ್ಯವನ್ನು ನವೆಂಬರ್ 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಡಲಿದೆ. 16ರಂದು ಈಡನ್ ಗಾರ್ಡನ್ಸ್​ನಲ್ಲಿ ನಡೆಯಲಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಪಂದ್ಯ ನ.15ರಂದು ವಾಂಖೆಡೆಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಗಂಗೂಲಿಯ ತವರು ಕೂಡ ಕೋಲ್ಕೊತಾ ಆದ ಕಾರಣದಿಂದ ಅವರು ಪಾಕಿಸ್ತಾನ ಮತ್ತು ಭಾರತ ಸೆಮಿಫೈನಲ್​ ಪ್ರವೇಶಿಸ ಬೇಕು ಎಂದು ಮೇಲ್ನೋಟಕ್ಕೆ ಹೇಳಿದ ಹಾಗಿದೆ. ಏಕೆಂದರೆ ತವರಿನಲ್ಲೇ ಈ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು ಅಲ್ಲದೆ ಪಾಕ್​ ಸೋಲನ್ನು ಇನ್ನೂ ಹೆಚ್ಚಾಗಿ ಸಂಭ್ರಮಿಸಬಹುದು.

ಇದನ್ನೂ ಓದಿ Virat Kohli : ಕೊಹ್ಲಿಯನ್ನು ಟೀಕಿಸಿದವರ ಬಾಯ್ಮುಚ್ಚಿಸಿದ ವೆಂಕಟೇಶ್​ ಪ್ರಸಾದ್​​

ಈಗಾಗಲೇ ಮೂರು ತಂಡಗಳಾದ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್​ ಪ್ರವೇಶಿಸಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಮೂರು ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಡ್ಡಿದೆ. ಈ ತಂಡಗಳೆಂದರೆ ನ್ಯೂಜಿಲ್ಯಾಂಡ್​, ಪಾಕಿಸ್ತಾನ ಮತ್ತು ಅಫಘಾನಿಸ್ತಾ. ಮೂರು ತಂಡಗಳಿಗೂ ತಲಾ ಒಂದು ಪಂದ್ಯ ಮಾತ್ರ ಬಾಕಿ ಉಳಿದಿವೆ. ಗೆದ್ದರೆ ಸೆಮಿ ಟಿಕೆಟ್​ ಸಿಗಬಹುದು ಸೋತರೆ ಟೂರ್ನಿಯಿಂದ ಹೊರಬೀಳಲಿದೆ.

ಭದ್ರತಾ ಸಮಸ್ಯೆ

ಸೆಮಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾದರೆ ಈ ಪಂದ್ಯದ ತಾಣವನ್ನು ಬದಲಿಸಲು ಪ್ರಮುಖ ಕಾರಣ ಭದ್ರತೆ. ಈ ಪಂದ್ಯ ಮುಂಬೈಯಲ್ಲಿ ನಡೆದರೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಗುಪ್ತಾಚಾರ ಇಲಾಖೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದೇ ಕಾರಣಕ್ಕೆ ಪಂದ್ಯದ ತಾಣ ಬದಲಿಸಲು ನಿರ್ಧರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 2008ರಲ್ಲಿ ಮುಂಬೈ ದಾಳಿಯಾಗಿತ್ತು. ಹೀಗಾಗಿ ಪಾಕ್​ ಮತ್ತು ಭಾರತ ಮುಂಬೈನಲ್ಲಿ ಪಂದ್ಯ ಆಡಿದರೆ ಏನಾದರು ಗಲಭೆಗಳು ಸಂಭವಿಸುವ ಮುನ್ನೆಚ್ಚರಿಕೆಯೂ ಇಲ್ಲಿನ ಪೊಲೀಸರಿಗೆ ಇರುವ ಸಾಧ್ಯತೆ ಇದೆ. ಪಂದ್ಯದ ತಾಣವನ್ನು ಬದಲಿಸುವ ವಿಚಾರವಾಗಿ ಬಿಸಿಸಿಐ ಅಥವಾ ಐಸಿಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ ಸೋತರೆ ಈ ಸಮಸ್ಯೆ ಎದುರಾಗದು. ಸೋಲು ಕಂಡ ಪಾಕಿಸ್ತಾನ ಆಗ ಟೂರ್ನಿಯಿಂದ ಹೊರಬೀಳುತ್ತದೆ. ಇಂದು(ಗುರುವಾರ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ನ್ಯೂಜಿಲ್ಯಾಂಡ್​ ಮತ್ತು ಲಂಕಾ ವಿರುದ್ಧದ ಪಂದ್ಯದ ಫಲಿತಾಂಶವೂ ಕೂಡ ಪಾಕ್​ ಸೆಮಿ ಲೆಕ್ಕಾಚಾರವನ್ನು ನಿರ್ಧರಿಸಲಿದೆ. ಒಂದೊಮ್ಮೆ ನ್ಯೂಜಿಲ್ಯಾಂಡ್​ ಸೋತರೆ ಇದರ ಲಾಭ ಪಾಕಿಸ್ತಾನಕ್ಕೆ ಲಭಿಸಲಿದೆ.

Exit mobile version