ಕೋಲ್ಕತಾ: ಕಳೆದ ಭಾನುವಾರ ನಡೆದ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಕೊನೆಯ ಪಂದ್ಯವನ್ನಾಡುವ ಮೂಲಕ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಹೇಳಿದ್ದ ಮನೋಜ್ ತಿವಾರಿ(Manoj Tiwary) ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ(ms dhoni) ಪ್ರಶ್ನೆಯೊಂದನ್ನು ಕೇಳುವುದಾಗಿ ಹೇಳಿದ್ದಾರೆ. ಶತಕ ಬಾರಿಸಿದರೂ ತಂಡದಲ್ಲಿ ಅವಕಾಶ ನೀಡದೆ ಕಡೆಗಣಿಸಿದಕ್ಕೆ ಧೋನಿ ಉತ್ತರಿಸಬೇಕಿದೆ ಎಂದಿದ್ದಾರೆ.
ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮನೋಜ್ ತಿವಾರಿ, ನನಗೆ ಅವಕಾಶ ಸಿಕ್ಕರೆ, ಶತಕ ಬಾರಿಸಿದ ನಂತರ ನನ್ನನ್ನು ತಂಡದಿಂದ ಏಕೆ ಕೈಬಿಡಲಾಯಿತು ಎಂದು ಧೋನಿಗೆ ಕೇಳುತ್ತೇನೆ. ಏಕೆಂದರೆ ಅವರು ಆ ಸಮಯದಲ್ಲಿ ತಂಡದ ನಾಯಕರಾಗಿದ್ದರು. ವಿಶೇಷವಾಗಿ ಅಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಯಾರೂ ರನ್ ಗಳಿಸಲಿಲ್ಲ. ಅವರನ್ನು ಮುಂದಿನ ಪಂದ್ಯದಲ್ಲಿ ಆಡಿಸಲಾಗಿತ್ತು. ಆದರೆ ಶತಕ ಬಾರಿಸಿದ್ದ ನನನ್ನು ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ಧೋನಿಯ ಬಳಿ ನಾನು ಪ್ರಶ್ನೆ ಮಾಡಬೇಕಿದೆ ಎಂದು ಹೇಳಿದರು.
Few moments bring tears to your eyes, few moments make you emotional… 🙌#GoodByeCricket pic.twitter.com/d4Pd8nSXbZ
— MANOJ TIWARY (@tiwarymanoj) February 19, 2024
ರಣಜಿ ಟ್ರೋಫಿ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರನ್ ಗುಡ್ಡೆ ಹಾಕಿ ಟೀಂ ಇಂಡಿಯಾದ ಕದ ತಟ್ಟಿದ್ದ ಬಂಗಾಲದ ಪ್ರತಿಭಾನ್ವಿತ ಬ್ಯಾಟ್ಸಮನ್ ಮನೋಜ್ ತಿವಾರಿಗೆ ಸರಿಯಾದ ಅವಕಾಶಗಳೇ ಸಿಗಲಿಲ್ಲ. 2008ರಲ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಮನೋಜ್ ತಿವಾರಿ, ಒಂದು ಪಂದ್ಯದಲ್ಲಿ ಶತಕ ಸಿಡಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೂ, ಮುಂದಿನ ಪಂದ್ಯದಲ್ಲೇ ತಂಡದಿಂದ ಹೊರಬಿದ್ದರು. 2011ರ ಚೆನ್ನೈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ್ದರು. ಪಂದ್ಯವನ್ನು ಗೆಲ್ಲಿಸಿದ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಆದರೆ ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ತಿವಾರಿ ಇರಲಿಲ್ಲ.
ತಿವಾರಿಗೆ ಅವಕಾಶ ಸಿಕ್ಕಿದ್ದು 14 ಪಂದ್ಯಗಳ ನಂತರ 18 ವರ್ಷದ ಇಂಡಿಯಾ ಜರ್ನಿಯಲ್ಲಿ ತಿವಾರಿ ಆಡಿದ್ದು ಕೇವಲ 12 ಏಕದಿನ ಪಂದ್ಯಗಳನ್ನು ಮಾತ್ರ. ಇದರಲ್ಲಿ ತಲಾ ಒಂದು ಶತಕ ಮತ್ತು ಅರ್ಧಶಕ ಒಳಗೊಂಡಿದೆ. ಬೌಲಿಂಗ್ನಲ್ಲಿಯೂ ಮಿಂಚಿದ್ದ ಅವರು 5 ವಿಕೆಟ್ ಉರುಳಿಸಿದ್ದಾರೆ. ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. 98 ಐಪಿಎಲ್ ಪಂದ್ಯ ಆಡಿ 1695 ರನ್ ಕಲೆಹಾಕಿದ್ದಾರೆ.
ಮನೋಜ್ ತಿವಾರಿ ಅವರು ಜುಲೈ 14, 2015ರಂದು ಜಿಂಬಾಬ್ವೆ ವಿರುದ್ಧ ಭಾರತ ತಂಡದ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಅವರಿಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ. ಆದರೆ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಆಟ ಮುಂದುವರಿಸಿದ್ದರು. ಇದೀಗ ಎಲ್ಲ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಸಂಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಬಂಗಾಳದ ಕ್ರೀಡಾ ಸಚಿವ
ರಾಜಕೀಯದಲ್ಲೂ ಸಿಕ್ರಿಯವಾಗಿರುವ ಮನೋಜ್ ತಿವಾರಿ(Minister of State for Youth Services and Sports of West Bengal) ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ(mamata banerjee) ಅವರ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರುವ ಯುವ ಜನತೆಗೆ ಅನೇಕ ಯೋಜನೆಗಳನ್ನು ಕೂಡ ಅವರು ಜಾರಿಗೆ ತಂದಿದ್ದಾರೆ.