ನವದೆಹಲಿ: 2022ರ ಸಾಲಿನ ಪುರುಷರ ಮತ್ತು ಮಹಿಳಾ ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ(ICC Awards) ಕ್ರಮವಾಗಿ ಟೀಮ್ ಇಂಡಿಯಾದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಮತ್ತು ಸ್ಮೃತಿ ಮಂಧಾನಾ ಅವರು ಗುರುವಾರ ನಾಮನಿರ್ದೇಶನಗೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ಟಿ20 ವಿಶ್ವ ಕಪ್ ವಿಜೇತ ಇಂಗ್ಲೆಂಡ್ ತಂಡದ ಸ್ಯಾಮ್ ಕರನ್, ಪಾಕಿಸ್ಥಾನದ ವಿಕೆಟ್‌ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಜಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಾಜಾ ಅವರೊಂದಿಗೆ ಸೂರ್ಯಕುಮಾರ್ ಯಾದವ್ ನಾಮನಿರ್ದೇಶನಗೊಂಡಿದ್ದಾರೆ.
2022ರ ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ ಟಿ20 ಕ್ರಿಕೆಟ್ನಲ್ಲಿ ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ. ಅವರು 187.43 ರ ಸ್ಟ್ರೈಕ್ ರೇಟ್‌ನಲ್ಲಿ 1164 ರನ್‌ಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಜತೆಗೆ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಈ ಎಲ್ಲ ಸಾಧನೆಯಿಂದ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಹಿಳಾ ವಿಭಾಗದಲ್ಲಿ ಪಾಕಿಸ್ಥಾನದ ಆಲ್‌ರೌಂಡರ್ ನಿದಾ ದಾರ್, ನ್ಯೂಜಿಲ್ಯಾಂಡ್ನ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ತಹ್ಲಿಯಾ ಮೆಕ್‌ಗ್ರಾತ್ ಮತ್ತು ಮಂಧಾನಾ ರೇಸ್ನಲ್ಲಿದ್ದಾರೆ. ಈ ಪ್ರಶಸ್ತಿಗಾಗಿ ಮತದಾನ ಜನವರಿಯಲ್ಲಿ ಆರಂಭವಾಗಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ವನಿತಾ ತಂಡದ ಉಪನಾಯಕಿಯಾಗಿರುವ ಸ್ಮೃತಿ ಮಂಧಾನಾ ಕಳೆದ ವರ್ಷ ಅತ್ಯುತ್ತಮ ಮಹಿಳಾ ವರ್ಷದ ಕ್ರಿಕೆಟಿಗರಾಗಿ ಪ್ರತಿಷ್ಠಿತ ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿ ಗೆದ್ದಿದ್ದರು. ಇದೀಗ ಮಂಧಾನಾ ಮತ್ತೊಮ್ಮೆ ನಾಮನಿರ್ದೇಶನಗೊಂಡು ಗಮನಸೆಳೆದಿದ್ದಾರೆ. ಅದರಂತೆ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ | ICC Awards | ಐಸಿಸಿ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವೇಗಿ ಅರ್ಶ್ದೀಪ್ ಸಿಂಗ್!