ದುಬೈ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿರಿಯ ಆಟಗಾರ ಶಕಿಬ್ ಅಲ್ ಹಸನ್ ಅವರು ಮಾರ್ಚ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ(ICC Awards) ಭಾಜನಾರಾಗಿದ್ದಾರೆ. ಈ ರೇಸ್ನಲ್ಲಿದ್ದ ಯುಎಇ ತಂಡದ ಆಸಿಫ್ ಖಾನ್ ಮತ್ತು ಕಿವೀಸ್ ತಂಡದ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿ ಶಕೀಬ್ ಈ ಪ್ರಶಸ್ತಿ ಗೆದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ಈ ಮೂವರು ಕ್ರಿಕೆಟಿಗರನ್ನು ನಾಮನಿರ್ದೇಶನ ಮಾಡಿತ್ತು. ಒಂದು ತಿಂಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನ್ನು ಪರಿಗಣಿಸಿ ಅಂತಿಮವಾಗಿ ಒರ್ವ ಆಟಗಾರನಿಗೆ ಈ ಪಶಸ್ತಿ ನೀಡಲಾಗುತ್ತದೆ. ಈ ಬಾರಿ ಶಕೀಬ್ಗೆ ಪಶಸ್ತಿ ಒಲಿದಿದೆ.
ಪ್ರಶಸ್ತಿ ಗೆದ್ದ ಬಳಿಕ ಹರ್ಷ ವ್ಯಕ್ತಪಡಿಸಿದ ಶಕಿಬ್ “ಐಸಿಸಿ ಮಾರ್ಚ್ ತಿಂಗಳ ಪ್ರಶಸ್ತಿ ಗೆದ್ದಿರುವುದು ನನಗೆ ಗೌರವ ತಂದಿದೆ. ನನಗೆ ಮತ ಹಾಕಿದ ಪರಿಣಿತ ಪ್ಯಾನೆಲಿಸ್ಟ್‌ಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಹೇಳಿದರು. ಶಕೀಬ್ ಅಲ್ ಹಸನ್ ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಆಡಿದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕತ್ವ ವಹಿಸಿದ್ದರು. ಇದಕ್ಕೂ ಮೊದಲು ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 7000 ರನ್ ಗಳಿಸಿದ ಮತ್ತು 300 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ IPL 2023: ಚೆನ್ನೈ ತಂಡವನ್ನು ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ ಶಾಸಕ ವೆಂಕಟೇಶ್ವರನ್
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಈ ಸರಣಿಯಲ್ಲಿ 141 ರನ್ ಗಳಿಸಿದ್ದರು. ಇದರಲ್ಲಿ ಎರಡು ಅರ್ಧ ಶತಕಗಳು ಒಳಗೊಂಡಿದ್ದವು. ಅಲ್ಲದೇ 6 ವಿಕೆಟ್‌ಗಳನ್ನು ಪಡೆದಿದ್ದರು. ಬಳಿಕ ಐರ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಏಕದಿನ ಸರಣಿ ಗೆಲುವು ಟಿ20 ಸರಣಿ ಗೆಲುವಿನಲ್ಲಿ ಶಕೀಬ್ ಉತ್ತಮ ಪ್ರದರ್ಶನ ತೋರಿದ್ದರು. ಒಟ್ಟಾರೆ ಶಕೀಬ್ ಅಲ್ ಹಸನ್ ಅವರು ಮಾರ್ಚ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 353 ರನ್ ಮತ್ತು 15 ವಿಕೆಟ್ ಪಡೆದಿದ್ದರು. ಇದೇ ಸಾಧನೆಗೆ ಅವರಿಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ನೀಡಿ ಗೌರವಿಸಿದೆ.