ದುಬೈ: 2022ರ ಟೆಸ್ಟ್ ಕ್ರಿಕೆಟಿಗರ ಪ್ರಶಸ್ತಿಗೆ(ICC Awards) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದು ಇಂಗ್ಲೆಂಡ್ ತಂಡದ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಟೀಮ್ ಇಂಡಿಯಾದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ.
ಕಳೆದ ಏಕದಿನ ಕ್ರಿಕೆಟಿಗರ ಪ್ರಶಸ್ತಿ ಪಟ್ಟಿಯಲ್ಲಿಯೂ ಟೀಮ್ ಇಂಡಿಯಾ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇದೀಗ ಟೆಸ್ಟ್ ಕ್ರಿಕೆಟಿಗರ ಪ್ರಶಸ್ತಿ ರೇಸ್ನಲ್ಲಿಯೂ ಕಾಣಿಸಿಕೊಂಡಿಲ್ಲ. 2022ರ ಸಾಲಿನಲ್ಲಿ ಟೀಮ್ ಇಂಡಿಯಾ ಆಟಗಾರರು ಹೇಳಿಕೊಳ್ಳುವಂತಹ ಸಾಧನೆ ತೋರುವಲ್ಲಿ ಎಡವಿದ್ದೇ ಇದಕ್ಕೆ ಪ್ರಮುಖ ಕಾರಣ.
ಶನಿವಾರ ಪ್ರಕಟಗೊಂಡ 2022ರ ಟೆಸ್ಟ್ ಕ್ರಿಕೆಟಿಗರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪಟ್ಟಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟೋಕ್ಸ್ 2022ರಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿದ್ದು ಒಟ್ಟು 870 ರನ್ ಮತ್ತು 26 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಜತೆಗೆ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು 9 ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಾನಿ ಬೇರ್ಸ್ಟೊ, ಆಸ್ಟ್ರೇಲಿಯಾ ಕ್ರಿಕೆಟಿಗ ಉಸ್ಮಾನ್ ಖ್ವಾಜಾ ಮತ್ತು ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೊ ರಬಾಡ ಈ ಪಟ್ಟಿಯಲ್ಲಿರುವ ಉಳಿದ ಆಟಗಾರರು.
ಇದನ್ನೂ ಓದಿ | ICC AWARDS | ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿ ರೇಸ್ನಲ್ಲಿರುವ ಆಟಗಾರರು