ಮುಂಬಯಿ : ಮುಂಬರುವ ಏಕ ದಿನ ವಿಶ್ವ ಕಪ್ನಲ್ಲಿ (World Cup 2023) ತಮ್ಮ ತಂಡದ ಪಂದ್ಯಗಳ ತಾಣಗಳನ್ನು ಬದಲಾಯಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿರುವ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸಾರಸಗಟವಾಗಿ ತಿರಸ್ಕರಿಸಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿಶ್ವ ಕಪ್ ಆತಿಥ್ಯ ಪಡೆದಿರುವ ಬಸಿಸಿಐಗೆ ತೊಂದರೆ ಕೊಡುವ ಉದ್ದೇಶದಿಂದ ಇಲ್ಲ ಸಲ್ಲದ ಮನವಿಗಳನ್ನು ಮಾಡುತ್ತಲೇ ಇದೆ. ಅದರ ಪ್ರಕಾರ ಎರಡು ಪಂದ್ಯಗಳಿಗೆ ಸ್ಥಳಗಳನ್ನು ಬದಲಾಯಿಸುವಂತೆ ಐಸಿಸಿಗೆ ಪತ್ರ ಬರೆದಿದೆ. ಬೆಂಗಳೂರಿನಲ್ಲಿ (Bangalore) ಆಸ್ಟ್ರೇಲಿಯಾ ಮತ್ತು ಚೆನ್ನೈನಲ್ಲಿ (Chennai) ಅಫ್ಘಾನಿಸ್ತಾನ ವಿರುದ್ಧ ಪಂದ್ಯಗಳನ್ನು ಆಡುವುದು ಸಾಧ್ಯ ಇಲ್ಲ ಎಂದಿದೆ. ಸ್ಪಿನ್ ಸ್ನೇಹಿ ಚೆಪಾಕ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ಥಾನ ಮತ್ತು ಬ್ಯಾಟಿಂಗ್ ಸ್ನೇಹಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಸಾಧ್ಯವಿಲ್ಲ ಎಂಬುದು ಪಿಸಿಬಿ ಅಭಿಪ್ರಾಯವಾಗಿದೆ. ಆದರೆ ಈ ಅಭಿಪ್ರಾಯವನ್ನು ಬಿಸಿಸಿಐ ತಿರಸ್ಕರಿಸಿದೆ.
ಮಂಗಳವಾರ ರಾತ್ರಿ ನಡೆದ ಬಿಸಿಸಿಐ ಹಾಗೂ ಐಇಸಿಸಿ ಜಂಟಿ ಸಭೆಯಲ್ಲಿ, ಸ್ಥಳಗಳನ್ನು ಬದಲಾಯಿಸಲು ಪಾಕಿಸ್ತಾನ ತಂಡ ಸೂಕ್ತ ಕಾರಣವನ್ನು ನೀಡದ ವಿನಂತಿಯನ್ನು ತಿರಸ್ಕರಿಸಲಾಯಿತು. ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಪ್ರಕಾರ ಪಿಸಿಬಿಯ ಆಂತರಿಕ ಮೆಮೋ ಪ್ರಕಾರ ಎರಡೂ ತಾಣಗಳಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲು ಖಚಿತ. ಹೀಗಾಗಿ ಸ್ಥಳ ಬದಲಾವಣೆಗೆ ಮನವಿ ಮಾಡಿದೆ.
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಮತ್ತು ಚೆನ್ನೈನಲ್ಲಿನ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಲು ನೋಡಬೇಕು. ಚೆನ್ನೈನಲ್ಲಿ ಆಸ್ಟ್ರೇಲಿಯಾ ಮತ್ತು ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡುವುದೇ ಸೂಕ್ತ ಎಂಬುದು ಅಲ್ಲಿನ ಕ್ರಿಕೆಟ್ ಮಂಡಳಿಯ ಅಭಿಪ್ರಾಯ.
ಪಿಸಿಬಿಯ ನಿರೀಕ್ಷೆಯೇನು?
ಚೆನ್ನೈನ ಚೆಪಾಕ್ ಕ್ರೀಡಾಂಗಣ ಮತ್ತೊಮ್ಮೆ ಸ್ಪಿನ್ ಸ್ನೇಹಿ ತಾಣವಾಗುವ ಸಾಧ್ಯತೆಯಿದೆ. ಅಫ್ಘಾನಿಸ್ತಾನವು ವಿಶ್ವದ ಅತ್ಯುತ್ತಮ ಸ್ಪಿನ್ ಬೌಲಿಂಗ್ ದಾಳಿಯನ್ನು ಹೊಂದಿದೆ. ಹೀಗಾಗಿಪಾಕಿಸ್ತಾನವು ಚೆನ್ನೈನಲ್ಲಿ ಆ ತಂಡವನ್ನು ಎದುರಿಸಲು ಹೆದರುತ್ತಿದೆ. ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ಆಡಿದರೆ ಬ್ಯಾಟಿಂಗ್ ಸ್ನೇಹಿ ಪಿಚ್ ಬಾಬರ್ ಅಜಮ್ ಬಳಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಉತ್ತಮ ಬ್ಯಾಟಿಂಗ್ ಬಲವನ್ನು ಹೊಂದಿರುವ ಪಾಕಿಸ್ತಾನಕ್ಕೆ ಗೆಲುವಿನ ಅವಕಾಶ ಹೆಚ್ಚು. ಅದೇ ರೀತಿ ಪಾಕಿಸ್ತಾನವು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ವಿರುದ್ಧ ಆಡಿದೆ, ಮೊಹಮ್ಮದ್ ನವಾಜ್ ಮತ್ತು ಶದಾಬ್ ಖಾನ್ ಅವರಂತಹ ಸ್ಪಿನ್ನರ್ಗಳು ಪ್ಯಾಟ್ ಕಮಿನ್ಸ್ ಮತ್ತು ಬಳಗಕ್ಕೆ ಹೆಚ್ಚು ಕಾಡಬಹುದು.
ಸಾಮಾನ್ಯವಾಗಿ, ಭದ್ರತಾ ಕಾರಣಗಳಿಗೆ ಮಾತ್ರ ಸ್ಥಳ ಬದಲಾವಣೆಯನ್ನು ಕೋರಬಹುದು. ಆದರೆ, ಇಲ್ಲಿ ಅಂಥ ಕಾರಣ ಇಲ್ಲ. 2016 ರ ಟಿ20 ವಿಶ್ವಕಪ್ ವೇಳೆ ಪಾಕಿಸ್ತಾನ ತಂಡದ ಪಂದ್ಯವನ್ನು ಭದ್ರತಾ ಕಾರಣಕ್ಕೆ ಕೋಲ್ಕೊತಾಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಒಂದು ತಂಡವು ತನ್ನ ಅನುಕೂಲಕ್ಕಾಗಿ ಇಡೀ ವೇಳಾಪಟ್ಟಿ ಬಿಡುಗಡೆಯಾಗದಂತೆ ನೋಡಿಕೊಂಡಿರುವುದು ಅಚ್ಚರಿಯ ವಿಷಯವಾಗಿದೆ.
ಇದನ್ನೂ ಓದಿ : World Cup 2023 : ಜೂನ್ 27ರಂದು ಐಸಿಸಿ ವಿಶ್ವಕಪ್ ವೇಳಾಪಟ್ಟಿ ಪ್ರಕಟ?
ಪಾಕಿಸ್ತಾನವು ಈ ಎರಡು ಪಂದ್ಯಗಳು ಮಾತ್ರ ಅಲ್ಲ, ಅಹ್ಮದಾಬಾದ್ನಲ್ಲಿ ಭಾರತ ವಿರುದ್ಧ, ಕೋಲ್ಕತಾದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಗಳನ್ನೂ ಆಡುತ್ತಿಲ್ಲ ಎಂದು ಹೇಳುತ್ತಿದೆ. ಪಾಕಿಸ್ತಾನವು ತಂಡ ಲಕ್ನೋದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆಡುವುದಾಗಿ ಹೇಳಿದೆ. ಪಾಕಿಸ್ತಾನ ತಂಡಕ್ಕೆ ಆರಾಮದಾಯಕವಾದ ಮತ್ತೊಂದು ಸ್ಥಳವೆಂದರೆ ದೆಹಲಿ. ಪಿಸಿಬಿಯ ಒತ್ತಡದ ನಡುವೆಯೂ ಐಸಿಸಿ ಸ್ಥಳವನ್ನು ಬದಲಾಯಿಸುವ ಅವರ ಬೇಡಿಕೆಗೆ ಮನ್ನಣೆ ನೀಡಿಲ್ಲ.
ಪಾಕಿಸ್ತಾನ ವಿಶ್ವಕಪ್ 2023 ತಾತ್ಕಾಲಿಕ ವೇಳಾಪಟ್ಟಿ
ಅಕ್ಟೋಬರ್ 6: ಹೈದರಾಬಾದ್ನಲ್ಲಿ ಕ್ವಾಲಿಫೈಯರ್ ತಂಡದ ವಿರುದ್ಧ
ಅಕ್ಟೋಬರ್ 12: ಹೈದರಾಬಾದ್ನಲ್ಲಿ ಕ್ವಾಲಿಫೈಯರ್ ತಂಡದ ವಿರುದ್ದ
ಅಕ್ಟೋಬರ್ 15: ಅಹ್ಮದಾಬಾದ್ನಲ್ಲಿ ಭಾರತ ವಿರುದ್ಧ
ಅಕ್ಟೋಬರ್ 20: ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ
ಅಕ್ಟೋಬರ್ 23: ಚೆನ್ನೈನಲ್ಲಿ ಅಫ್ಘಾನಿಸ್ತಾನ
ಅಕ್ಟೋಬರ್ 27: ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ
ಅಕ್ಟೋಬರ್ 31: ಕೋಲ್ಕತಾದಲ್ಲಿ ಬಾಂಗ್ಲಾದೇಶ ವಿರುದ್ಧ
ನವೆಂಬರ್ 5: ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ
ನವೆಂಬರ್ 12: ಕೋಲ್ಕತಾದಲ್ಲಿ ಇಂಗ್ಲೆಂಡ್ ವಿರುದ್ಧ