ಬೆಂಗಳೂರು: ಬುಧವಾರ ನಡೆದ ವಿಶ್ವಕಪ್ನ(World Cup 2023) 40ನೇ ಪಂದ್ಯದಲ್ಲಿ ನೆದರ್ಲೆಂಡ್ಸ್(England vs Netherlands) ವಿರುದ್ಧ 160 ರನ್ಗಳ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡದ ಚಾಂಪಿಯನ್ಸ್ ಟ್ರೋಫಿ(ICC Champions Trophy 2025) ಕನಸು ಜೀವಂತವಾಗಿದೆ. ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ 7 ಸ್ಥಾನ ಪಡೆದ ತಂಡಗಳು ಈ ಟೂರ್ನಿಗೆ ನೇರ ಅರ್ಹತೆ ಪಡೆಯಲಿದೆ.
ನೆದರ್ಲೆಂಡ್ಸ್ ವಿರುದ್ಧ ಗೆಲುವು ಸಾಧಿಸಿದ ಕಾರಣ ಸದ್ಯ ಇಂಗ್ಲೆಂಡ್ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ. ಇನ್ನೊಂದು ಪಂದ್ಯ ಗೆದ್ದರೆ ಆಂಗ್ಲರ ಪಡೆಗೆ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಸಿಗಲಿದೆ. ಇಂಗ್ಲೆಂಡ್ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಸೆಮಿಗೆ ಪ್ರವೇಶ ಪಡೆಯಬೇಕಿದ್ದರೆ ಬಾಬರ್ ಪಡೆಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಇತ್ತಂಡಗಳ ಈ ಪಂದ್ಯ ನ.11ರಂದು ನಡೆಯಲಿದೆ.
ಸತತ ಆರು ಸೋಲು ಕಂಡು ಕೊನೆಯ ಸ್ಥಾನದಲ್ಲಿದ್ದ ಇಂಗ್ಲೆಂಡ್ 2025ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿತ್ತು. ಆದರೆ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಇದೀಗ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಆಸೆ ಮತ್ತೆ ಚಿಗುರೊಡೆದಿದೆ. ಒಂದೊಮ್ಮೆ ಪಾಕಿಸ್ತಾನ ವಿರುದ್ಧದ ಅಂತಿಮ ಪಂದ್ಯವನ್ನು ಇಂಗ್ಲೆಂಡ್ ಸೋತರೆ, ಅತ್ತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಗೆಲುವು ಸಾಧಿಸಿದರೆ ಇಂಗ್ಲೆಂಡ್ 7ನೇ ಸ್ಥಾನದಿಂದ ಕೆಳಗೆ ಕುಸಿಯುವ ಜತೆಗೆ ಅಧಿಕೃತವಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲಿದೆ.
ಅಗ್ರ 7 ಸ್ಥಾನಗಳಿಗೆ ಅರ್ಹತೆ
ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ. ಈ ಟೂರ್ನಿಯ ಅರ್ಹತಾ ಸುತ್ತನ್ನು ಐಸಿಸಿ ಸಮಿತಿ 2021ರಲ್ಲೇ ಅಂತ್ಯಗೊಳಿಸಿದೆ. ಐಸಿಸಿ ಮಾನದಂಡದ ಪ್ರಕಾರ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಅಗ್ರ 7ರೊಳಗೆ ಸ್ಥಾನ ಪಡೆದ ತಂಡಗಳು ಅರ್ಹತೆ ಗಿಟ್ಟಿಸಿಕೊಳ್ಳಲಿದೆ. 7 ರಿಂದ ಕೆಳಗಿರುವ ತಂಡಗಳು ಟೂರ್ನಿಯಿಂದ ಹೊರಬೀಳಲಿದೆ. ಸದ್ಯ ಇಂಗ್ಲೆಂಡ್ 7ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯ ಗೆದ್ದರೆ ಅರ್ಹತೆ ಪಡೆಯಲಿದೆ. ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರೂ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಖುಷಿಯೊಂದು ಇಂಗ್ಲೆಂಡ್ ಪಾಲಿಗೆ ಸಿಗಲಿದೆ.
ಇದನ್ನೂ ಓದಿ ENG vs NED: ಸತತ 6 ಸೋಲಿನ ಬಳಿಕ ಗೆಲುವು ಕಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್
ಅಫಘಾನಿಸ್ತಾನ ತಂಡ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಅಗ್ರ 7ರೊಳಗೆ ಸ್ಥಾನ ಪಡೆದ ಕಾರಣ ಈ ತಂಡ ಈಗಾಗಲೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಉಳಿದಂತೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಕೂಡ ನೇರ ಅರ್ಹತೆ ಪಡೆದಿದೆ. ಏಕೆಂದರೆ ಈ ತಂಡಗಳು ಅಗ್ರ 5ರೊಳಗೆ ಸ್ಥಾನ ಪಡೆದಿವೆ.
The 2025 Champions Trophy is set to be the first major ICC tournament to be hosted in Pakistan since 1996 🇵🇰 pic.twitter.com/2HAX92IMP8
— ESPNcricinfo (@ESPNcricinfo) November 16, 2021
ಐಸಿಸಿ 2021ರಲ್ಲೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆಯ ನಿಯಮಗಳನ್ನು ಅಂತ್ಯಗೊಳಿಸಿದ ವಿಚಾರದಲ್ಲಿ ಈಗ ಹಲವು ಕ್ರಿಕೆಟ್ ಸಂಸ್ಥೆಗಳು ಅಸಮಾಧಾನ ಹೊರಹಾಕಿದೆ. ತಮಗೆ ಈ ಅರ್ಹತೆಯ ಲೆಕ್ಕಾಚಾರಗಳ ಬಗ್ಗೆ ಸೂಕ್ತ ಮಾಹಿತಿಯೇ ಇರಲಿಲ್ಲ ಎಂದು ಐಸಿಸಿ ವಿರುದ್ಧ ಆರೋಪ ಮಾಡಿವೆ.