Site icon Vistara News

Ashes 2023: ಇಂಗ್ಲೆಂಡ್​-ಆಸೀಸ್​ ತಂಡಕ್ಕೆ ತಲಾ 2 ಅಂಕ ಕಡಿತ; ಆಟಗಾರರಿಗೂ ತಗುಲಿತು ಭಾರಿ ದಂಡದ ಬಿಸಿ

pat cummins and ben stokes

ಬರ್ಮಿಂಗ್‌ಹ್ಯಾಮ್‌: ಮಳೆಯ ಹೊಡೆತದ ಮಧ್ಯೆಯೂ ಆ್ಯಶಸ್‌(Ashes 2023) ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ತಂಡ 2 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್(icc test championship)​ ಟೂರ್ನಿಯಲ್ಲಿ ಮೊದಲ ಗೆಲುವನ್ನು ಗಿಟ್ಟಿಸಿಕೊಂಡಿತು. ಆದರೆ ಗೆಲುವಿನ ಸಂಭ್ರಮದಲ್ಲಿದ್ದ ಆಸೀಸ್​ಗೆ ಮತ್ತು ಸೋಲಿನ ಆಘಾತಕ್ಕೆ ಸಿಲುಕಿದ ಇಂಗ್ಲೆಂಡ್​ಗೆ ಐಸಿಸಿ(ICC) ದಂಡದ ಬಿಸಿ ಮುಟ್ಟಿಸಿದೆ.

ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡ ಕಾರಣಕ್ಕೆ ಉಭಯ ತಂಡಗಳಿಗೂ ಐಸಿಸಿ ತಲಾ ಎರಡು ಅಂಕಗಳನ್ನು ಕಡಿತಗೊಳಿಸಿದೆ. ಇದು ಸಾಲದೆಂಬಂತೆ ಎರಡೂ ತಂಡದ ಆಟಗಾರರಿಗೂ ಪಂದ್ಯದ ಶುಲ್ಕದ ಶೇಕಡಾ 40ರಷ್ಟು ದಂಡ ಪಾವತಿಸಲು ಆದೇಶಿಸಿದೆ.

ಓವರ್‌ರೇಟ್ ನಿಯಮದಡಿಯಲ್ಲಿ ಮಾಡಿದ ತಪ್ಪನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ. ಜತೆಗೆ ಮುಂದಿನ ಭಾರಿ ಈ ತಪ್ಪು ಮರುಕಳಿಸದಂತೆ ಸೂಚನೆ ನೀಡಿದೆ. ಒಂದೊಮ್ಮೆ ಈ ತಪ್ಪು ಮತ್ತೆ ಕಂಡುಬಂದರೆ ನಾಯಕನಿ್ಎ ಒಂದು ಪಂದ್ಯದ ನಿಷೇಧ ಶಿಕ್ಷೆಯನ್ನು ವಿಧಿಸುವ ಹಕ್ಕು ಐಸಿಸಿಗೆ ಇದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಐಸಿಸಿ 12 ಅಂಕಗಳನ್ನು ನೀಡಲಾಗುತ್ತದೆ. ಅದರಂತೆ ಮೊದಲ ಪಂದ್ಯ ಗೆದ್ದ ಆಸ್ಟ್ರೇಲಿಯಾಕ್ಕೆ 12 ಅಂಕ ಲಭಿಸಿದೆ. ಆದರೆ 2 ಅಂಕ ಕಡಿತಗೊಂಡ ಕಾರಣ ಇದೀಗ ಆಸೀಸ್​ ಬಳಿ 10 ಅಂಕ ಮಾತ್ರ ಉಳಿದಿದೆ. ಸೋಲು ಕಂಡ ಇಂಗ್ಲೆಂಡ್​ -2 ಅಂಕ ಹೊಂದಿದೆ. ಅಂದರೆ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್​ ಗೆದ್ದಾಗ ಈ ಅಂಕವನ್ನು ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ Ashes 2023 : ಐಪಿಎಲ್​ನಲ್ಲಿ ಫೇಲ್​, ಆ್ಯಶಸ್​​ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್​; ಇಂಗ್ಲೆಂಡ್​ ಬ್ಯಾಟರ್​ನ ಬ್ಯಾಡ್​ಲಕ್​!

ಆಟಗಾರರಿಗೂ ದಂಡ ವಿಧಿಸಿದ ಐಸಿಸಿ

ಈ ತಪ್ಪಿಗಾಗಿ ಕೇವಲ ಅಂಕ ಕಡಿತ ಮಾತ್ರವಲ್ಲದೇ ಉಭಯ ತಂಡಗಳ ಆಟಗಾರರಿಗೂ ಪಂದ್ಯದ ಸಂಭಾವನೆಯ ಶೇ.40ರಷ್ಟು ದಂಡ ವಿಧಿಸಲಾಗಿದೆ. ಸರಣಿಯ ದ್ವಿತೀಯ ಪಂದ್ಯ ಜೂನ್​ 28ರಂದು ಐತಿಹಾಸಿಕ ಸ್ಟೇಡಿಯಂ ಲಾರ್ಡ್ಸ್​ನಲ್ಲಿ ನಡೆಯಲಿದೆ.

Exit mobile version