Site icon Vistara News

Sri Lanka Cricket: ಅಮಾನತು ಶಿಕ್ಷೆಯಿಂದ ಮುಕ್ತವಾದ ಶ್ರೀಲಂಕಾ ಕ್ರಿಕೆಟ್ ಮಂಡಳಿ

Sri Lanka Cricket

ದುಬೈ: ಅಮಾನತಿನ ಶಿಕ್ಷೆಗೆ ಗುರಿಯಾಗಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ)(Sri Lanka Cricket) ಈ ಶಿಕ್ಷೆಯಿಂದ ಮುಕ್ತವಾಗಿದೆ. ಅಂತಾರರಾಷ್ಟ್ರೀಯ ಕಿಕ್ರೆಟ್‌ ಕೌನ್ಸಿಲ್ (ICC) ಲಂಕಾ ಅಮಾನತು ಶಿಕ್ಷೆಯನ್ನು ತೆರವುಗಿಳಿಸಿ ಸದಸ್ಯತ್ವವನ್ನು ಮರುಸ್ಥಾಪಿಸಿದೆ.

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ತೋರಿದ ಕಾರಣದಿಂದ ಸಿಟ್ಟಾಗಿದ್ದ ಅಲ್ಲಿನ ಕ್ರೀಡಾಸಚಿವ ಇಡೀ ಕ್ರಿಕೆಟ್‌ ಮಂಡಳಿಯನ್ನೇ ವಿಸರ್ಜನೆ ಮಾಡಿದ್ದರು. ನಂತರ ಅಲ್ಲಿನ ನ್ಯಾಯಾಲಯ ಮಂಡಳಿಯನ್ನು ಪುನಃಸ್ಥಾಪನೆ ಮಾಡಿತ್ತು. ಈ ಎಲ್ಲ ಪ್ರಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ, ಕರ್ತವ್ಯ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ತಡೆಯಲು ಲಂಕಾ ಮಂಡಳಿ ವಿಫಲವಾಗಿದೆ ಎಂದು ಶ್ರೀಲಂಕಾದ ಸದಸ್ಯತ್ವವನ್ನು ರದ್ದು ಮಾಡಿತ್ತು. ಐಸಿಸಿ ನಿಯಮಗಳ ಪ್ರಕಾರ ಅದರ ಅಂಗಸಂಸ್ಥೆಗಳಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಗಳು ಹಸ್ತಕ್ಷೇಪ ಮಾಡುವಂತಿಲ್ಲ. ಹಾಗೆ ಮಾಡಿದರೆ ಆ ಸಂಸ್ಥೆಗಳ ಸದಸ್ಯತ್ವವನ್ನೇ ಇಲ್ಲದಂತೆ ಮಾಡುತ್ತದೆ.

ಐಸಿಸಿಯಿಂದ ಅಮಾನತು ಶಿಕ್ಷೆಗೆ ಒಳಗಾದ ಕಾರಣ ಲಂಕಾ ಆತಿಥ್ಯದಲ್ಲಿ ನಡೆಯಬೇಕಿದ್ದ ಅಂಡರ್​-19 ವಿಶ್ವಕಪ್​ ಟೂರ್ನಿ ಕೂಡ ಕೈತಪ್ಪಿ ಹೋಗಿತ್ತು. ದಕ್ಷಿಣ ಆಫ್ರಿಕಾ ಪಾಲಾಗಿತ್ತು. ಐಸಿಸಿ ಆದೇಶದ ವಿರುದ್ಧ ಶ್ರೀಲಂಕಾ ಕ್ರಿಕೆಟ್​ ನವೆಂಬರ್ 21 ರಂದು ಐಸಿಸಿಗೆ ಮೇಲ್ಮನವಿ ಸಲ್ಲಿಸಿತು. ಮೇಲ್ಮನವಿಯನ್ನು ಕೂಲಂಕುಷ ಪರೀಕ್ಷೆ ಮಾಡಿದ ಐಸಿಸಿ ಇದೀಗ 2 ತಿಂಗಳ ಬಳಿಕ ಅಮಾನತು ತೆರವುಗೊಳಿಸಿದೆ. ಹೀಗಾಗಿ ಲಂಕಾ ಕ್ರಿಕೆಟ್​ ಮಂಡಳಿ ಇನ್ನು ಐಸಿಸಿ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಬಹುದು.

ಇದನ್ನೂ ಓದಿ U-19 World Cup : ಲಂಕಾ ಕ್ರಿಕೆಟ್ ಮಂಡಳಿಗೆ ಆಘಾತ; ಬೃಹತ್​ ಟೂರ್ನಿಯ ಆತಿಥ್ಯ ನಷ್ಟ

ನಾಯಕತ್ವದ ಬದಲಾವಣೆ


ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಮೂರು ಮಾದರಿಯ ತಂಡಗಳಿಗೆ ನೂತನ ನಾಯಕನ್ನು ನೇಮಕ ಮಾಡಿತ್ತು. ​ಟೆಸ್ಟ್​ ತಂಡಕ್ಕೆ ಆಲ್ ರೌಂಡರ್ ಧನಂಜಯ ಡಿ ಸಿಲ್ವ(Dhananjaya de Silva) ಅವರನ್ನು ನಾಯಕನನ್ನಾಗಿ ಆಯ್ಕೆ ಮಾದರೆ, ವಾನಿಂದು ಹಸರಂಗ ಟಿ20, ಏಕದಿನ ತಂಡಕ್ಕೆ ಕುಸಾಲ್ ಮೆಂಡಿಸ್ ಅವರನ್ನು ನಾಯಕರನ್ನಾಗಿಸಿ ನೇಮಿಸಿತ್ತು.

32 ವರ್ಷದ ಧನಂಜಯ ಡಿ ಸಿಲ್ವ ಅವರು ಅಫಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ಮೂಲಕ ತಮ್ಮ ನಾಯಕನ ಜವಾಬ್ದಾರಿಯನ್ನು ಆರಂಭಿಸಲಿದ್ದಾರೆ. ಡಿ ಸಿಲ್ವ ಲಂಕಾದ 12ನೇ ಟೆಸ್ಟ್​ ನಾಯಕ ಎನಿಸಿಕೊಂಡಿದ್ದಾರೆ. ಡಿ ಸಿಲ್ವ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಲಂಕಾ ಕ್ರಿಕೆಟ್​ ಮಂಡಳಿ ಹೇಳಿದೆ. 51 ಟೆಸ್ಟ್‌ ಗಳನ್ನಾಡಿರುವ ಧನಂಜಯ ಡಿ ಸಿಲ್ವ 40 ರ ಸರಾಸರಿ ಯಲ್ಲಿ 3301 ರನ್‌ಗಳನ್ನು ಗಳಿಸಿದ್ದಾರೆ.

ಇದಕ್ಕೂ ಮುನ್ನ 2019 ಮತ್ತು 2023ರ ನಡುವೆ 30 ಟೆಸ್ಟ್‌ಗಳಲ್ಲಿ ದಿಮುತ್ ಕರುಣಾರತ್ನೆ ಅವರು ನಾಯಕತ್ವ ವಹಿಸಿದ್ದರು. ಇವರ ನಾಯಕತ್ವದಲ್ಲಿ 12 ಪಂದ್ಯಗಳಲ್ಲಿ ಗೆಲುವು, 12 ಸೋಲು, 6 ಡ್ರಾ ಸಾಧಿಸಿತ್ತು.

Exit mobile version