ದುಬೈ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ವಿರಾಟ್ ಕೊಹ್ಲಿ ಮತ್ತು ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ, ನೂತನ ಐಸಿಸಿ ಏಕದಿನ(ICC ODI Ranking) ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ.
ಐಸಿಸಿ ಬುಧವಾರ ಪ್ರಕಟಿಸಿದ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಎರಡು ಸ್ಥಾನ ಏರಿಕೆ ಕಾಣುವ ಮೂಲಕ 6ನೇ ಸ್ಥಾನಕ್ಕೆ ತಲುಪಿದ್ದಾರೆ. ನಾಯಕ ರೋಹಿತ್ ಶರ್ಮಾ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 113 ರನ್ ಪೇರಿಸಿದರೆ, ರೋಹಿತ್ ಶರ್ಮಾ 83 ರನ್ ಗಳಿಸಿದ್ದರು. ಈ ಪ್ರದರ್ಶನದಿಂದ ಉಭಯ ಆಟಗಾರರು ಶ್ರೇಯಾಂಕದಲ್ಲಿ ಮೇಲೇರಿದ್ದಾರೆ.
ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಅವರು 20 ಸ್ಥಾನಗಳ ಪ್ರಗತಿ ಕಂಡು 61 ಸ್ಥಾನಕ್ಕೆ ತಲುಪಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಅಜೇಯ ಶತಕ ಸಿಡಿಸಿ ಮಿಂಚಿದ್ದರು. ಉಳಿದಂತೆ ಬ್ಯಾಟಿಂಗ್ ಶ್ರೇಯಾಂಕದ ಪಟ್ಟಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಸದ್ಯ ಇನ್ನೂ ಎರಡು ಏಕದಿನ ಪಂದ್ಯಗಳು ಬಾಕಿ ಇದೆ. ಒಂದೊಮ್ಮೆ ಈ ಪಂದ್ಯದಲ್ಲಿ ಕೊಹ್ಲಿ, ರೋಹಿತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರೆ ಮತ್ತೆ ಶ್ರೇಯಾಂಕದಲ್ಲಿ ಏರಿಕೆ ಕಾಣುವ ಅವಕಾಶವಿದೆ. ಉಳಿದಂತೆ ಬೌಲಿಂಗ್ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ನಾಲ್ಕು ಸ್ಥಾನಗಳ ಏರಿಕೆ ಕಂಡು ಸದ್ಯ 18ನೇ ಸ್ಥಾನಕ್ಕೆ ತಲುಪಿದ್ದಾರೆ.
ಇದನ್ನೂ ಓದಿ | ICC Awards | ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಯುವ ಬ್ಯಾಟರ್ ಹ್ಯಾರಿ ಬ್ರೂಕ್!