Site icon Vistara News

ICC ODI Ranking: ಭಾರತ ಪಂದ್ಯಕ್ಕೂ ಮುನ್ನವೇ ಅಗ್ರ ಸ್ಥಾನದಿಂದ ಕೆಳಗಿಳಿದ ಪಾಕ್​

pakistan Team

ದುಬೈ: ಪಾಕಿಸ್ತಾನ ತಂಡ ಭಾರತ(IND vs PAK) ವಿರುದ್ಧ ಇಂದು ಏಷ್ಯಾಕಪ್​ನ(Asia Cup 2023) ಸೂಪರ್​-4 ಸುತ್ತಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಬಾಬರ್​ ಅಜಂ ಪಡೆ ಏಕದಿನ ಶ್ರೇಯಾಂಕದ(ICC ODI Ranking) ಅಗ್ರಸ್ಥಾನದಿಂದ ಕುಸಿತ ಕಂಡಿದೆ. ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ(Australia Cricket Team) ಗೆಲುವು ಸಾಧಿಸಿದ್ದು.

ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆದ್ದಾಗಲೇ ಅಗ್ರಸ್ಥಾನಕ್ಕೆ ನೆಗೆದಿತ್ತು. ಆದರೆ ಸಮಾನ ಅಂಕದೊಂದಿಗೆ ಪಾಕ್(Pakistan Cricket Team)​ ಕೂಡ ಜಂಟಿಯಾಗಿ ಅಗ್ರಸ್ಥಾನದಲ್ಲೇ ಮುಂದುವರಿದಿತ್ತು. ಇದೀಗ ಆಸೀಸ್​ ದ್ವಿತೀಯ ಪಂದ್ಯದಲ್ಲಿ ಗೆಲುವು ಸಾಧಿಸಿದ ಕಾರಣ ಒಂದು ಅಂಕದ ಮುನ್ನಡೆ ಸಾಧಿಸಿ ಅಗ್ರಸ್ಥಾನವನ್ನು ಅಧಿಕೃತವಾಗಿ ಪಡೆದುಕೊಂಡಿದೆ. ಪಾಕಿಸ್ತಾನ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.

ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶ

ಒಂದೊಮ್ಮೆ ಪಾಕಿಸ್ತಾನ ಇಂದು ನಡೆಯುವ ಭಾರತ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮತ್ತೆ ಅಗ್ರಸ್ಥಾನಕ್ಕೆ ಏರುವ ಅವಕಾಶವಿದೆ. ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಮೂರನೇ ಪಂದ್ಯದಲ್ಲಿ ಸೋಲು ಕಂಡರೂ ರೇಟಿಂಗ್​ ಅಂಕ ಕುಸಿತದಿಂದ ಅಗ್ರಸ್ಥಾನ ಕಳೆದುಕೊಳ್ಳಲುಬಹುದು. ಸದ್ಯ ಆಸ್ಟ್ರೇಲಿಯಾ 121 ರೇಟಿಂಗ್​ ಅಂಕ ಪಡೆದರೆ, ದ್ವಿತೀಯ ಸ್ಥಾನಿ ಪಾಕ್​ 120 ರೇಟಿಂಗ್​ ಅಂಕ ಪಡೆದಿದೆ. ಉಭಯ ತಂಡಗಳು 25 ಏಕದಿನ ಪಂದ್ಯಗಳನ್ನು ಆಡಿವೆ.

ಭಾರತಕ್ಕೆ ಮೂರನೇ ಸ್ಥಾನ

ಭಾರತ ತಂಡ ಪಾಕಿಸ್ತಾನ ವಿರುದ್ಧ ಇಂದು ಗೆದ್ದರೂ ಪ್ರಸ್ತುತ ಇರುವ ಮೂರನೇ ಶ್ರೇಯಾಂಕದಲ್ಲೇ ಮುಂದುವರಿಯಲಿದೆ. ಏಕೆಂದರೆ ಭಾರತ ಈಗ 37 ಪಂದ್ಯಗಳನ್ನು ಆಡಿ 114 ರೇಟಿಂಗ್​ ಅಂಕ ಹೊಂದಿದೆ. ಹೀಗಾಗಿ ಗೆದ್ದರೂ ಅಂಕದಲ್ಲಿ ಭಾರಿ ಬದಲಾವಣೆ ಕಷ್ಟಸಾಧ್ಯ. ನ್ಯೂಜಿಲ್ಯಾಂಡ್​ 106 ರೇಟಿಂಗ್​ ಅಂಕದೊಂದಿಗೆ 4ನೇ ಸ್ಥಾನ ಪಡೆದಿದೆ. ಹಾಲಿ ವಿಶ್ವಚಾಂಪಿಯನ್​ ಇಂಗ್ಲೆಂಡ್​(99 ರೇಟಿಂಗ್​ ಅಂಕ) 5ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

ಇದನ್ನೂ ಓದಿ IND vs PAK: ಇಂಡೋ-ಪಾಕ್​ ಪಂದ್ಯ ನೋಡಲು ಪ್ರವಾಸ, ಸುತ್ತಾಟ ಬದಿಗಿಟ್ಟ ಅಭಿಮಾನಿಗಳಿಗೆ ನಿರಾಸೆ…

ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಆಸೀಸ್​

ಶನಿವಾರ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆಸೀಸ್​ 8 ವಿಕೆಟಿಗೆ 392 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 41.5 ಓವರ್ ಗಳಲ್ಲಿ 269 ರನ್ ಗಳಿಗೆ ಆಲೌಟಾಯಿತು. ಆಸ್ಟ್ರೇಲಿಯ 123 ರನ್‌ಗಳ ಭರ್ಜರಿ ಜಯ ಸಾಧಿಸುವ ಜತೆಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಅಲ್ಲದೆ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಅಗ್ರಸ್ಥಾನ ಸಂಪಾದಿಸಿದೆ.

ವಿಶ್ವಕಪ್​ಗೆ ತಯಾರಿ

ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿದಿನ ವಿಶ್ವಕಪ್​ಗೆ ಎಲ್ಲ 10 ತಂಡಗಳು ಈಗಾಗಲೇ ಪೂರ್ವ ಸಿದ್ಧತೆಯನ್ನು ಆರಂಭಿಸಿದೆ. ಮಹತ್ವದ ಟೂರ್ನಿಗೆ ಬಲಿಷ್ಠ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್​ ಪಂದ್ಯಾವಳಿ ಅಕ್ಟೋಬರ್​ 5ರಿಂದ ಆರಂಭವಾಗಿ ನವೆಂಬರ್​ 19ರ ತನಕ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ಮುಖಾಮುಖಿಯಾಗಲಿವೆ. ಈ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

Exit mobile version