ದುಬೈ: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕ ದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದ ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ಐಸಿಸಿ ನೂತನ ಏಕ ದಿನ ಬ್ಯಾಟಿಂಗ್ ಶ್ರೇಯಾಂಕದ ಪಟ್ಟಿಯಲ್ಲಿ 117 ಸ್ಥಾನಗಳ ನೆಗೆತ ಕಂಡು 37ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಜತೆಗೆ ವಿರಾಟ್ ಕೊಹ್ಲಿ ಮೂರು ಸ್ಥಾನ ಪ್ರಗತಿ ಕಂಡು 8ನೇ ಸ್ಥಾನ ಸಂಪಾದಿಸಿದ್ದಾರೆ.
ಬುಧವಾರ ಬಿಡುಗಡೆಯಾದ ರ‍್ಯಾಂಕಿಂಗ್‌ನಲ್ಲಿ ಇಶಾನ್ ಕಿಶನ್ ಮತ್ತು ಕೊಹ್ಲಿ ಭಡ್ತಿ ಪಡೆದಿದ್ದಾರೆ. ಬಾಂಗ್ಲಾ ವಿರುದ್ಧದ ಏಕದಿನ ಪಂದ್ಯದಲ್ಲಿ ತೋರಿದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನದಿಂದ ಉಭಯ ಆಟಗಾರರು ತಮ್ಮ ಬ್ಯಾಟಿಂಗ್ ಶ್ರೇಯಾಂಕವನ್ನು ಉತ್ತಮ ಪಡಿಸಲು ಸಾಧ್ಯವಾಯಿತು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಬ್ಯಾಟರ್‌ಗಳಾದ ಬಾಬರ್ ಅಜಂ ಮೊದಲ ಸ್ಥಾನದಲ್ಲಿ, ಇಮಾಮ್ ಉಲ್ ಹಕ್ ಎರಡನೇ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾದ ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್ 3 ಮತ್ತು ಕ್ವಿಂಟನ್ ಡಿ ಕಾಕ್ 4ನೇ ರ‍್ಯಾಂಕ್‌ನಲ್ಲಿದ್ದಾರೆ.
ಢಾಕಾದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ 82 ರನ್ ಗಳಿಸಿದ ಶ್ರೇಯಸ್ ಅಯ್ಯರ್ ಈ ಪಟ್ಟಿಯಲ್ಲಿ 20 ರಿಂದ 15 ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಬೌಲರ್‌ಗಳ ಪೈಕಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ 22ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ | INDvsBAN | ಕ್ಯಾಚ್ ಬಿಟ್ಟಿದ್ದಕ್ಕೆ ಸಿಟ್ಟಿಗೆದ್ದು ಬಾಯಿಗೆ ಬಂದಂತೆ ನಿಂದಿಸಿದ ನಾಯಕ ರೋಹಿತ್ ಶರ್ಮ