ದುಬೈ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯವನ್ನಾಡುವ ಮೊದಲೇ ಟೀಮ್ ಇಂಡಿಯಾಗೆ(team india) ಸಿಹಿ ಸುದ್ದಿಯೊಂದು ದೊರೆತಿದೆ. ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ(ICC Ranking) ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಈ ಮೂಲಕ ಮೂರು ಮಾದರಿಯ ಕ್ರಿಕೆಟ್ನಲ್ಲಿ ಭಾರತ ಅಗ್ರಸ್ಥಾನ ಅಲಂಕರಿಸುವ ಮೂಲಕ ಪಾರುಪತ್ಯ ಮೆರೆದಿದೆ.
ನಾಗ್ಪುರದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಇನಿಂಗ್ಸ್ ಮತ್ತು 132 ರನ್ಗಳ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಇದೀಗ ಈ ಗೆಲುವಿನಿಂದ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ನಂ.1 ಸ್ಥಾನವನ್ನ ಭದ್ರಪಡಿಸಿಕೊಂಡಿದೆ.
ಭಾರತ ಈ ಹಿಂದೆ ಏಕ ದಿನ ಮತ್ತು ಟಿ20 ಮಾದರಿಯಲ್ಲಿ ನಂ. 1 ಆಗಿತ್ತು. ಈಗ ಟೆಸ್ಟ್‌ನಲ್ಲೂ ನಂ. 1 ಆಗಿದೆ. ಈ ಮೂಲಕ ಎಲ್ಲ ಮೂರು ಸ್ವರೂಪಗಳಲ್ಲಿ ನಂಬರ್ 1 ಸ್ಥಾನಕ್ಕೇರಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಶ್ರೇಯಾಂಕದ ಪ್ರಕಾರ, ಭಾರತ 115 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂಬರ್ 1 ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ ತಂಡ ಮೂರನೇ ಸ್ಥಾನದಲ್ಲಿದೆ.
ಭಾರತ ಕೇಲವ ತಂಡ ಶ್ರೇಯಾಂಕದಲ್ಲಿ ಮಾತ್ರವಲ್ಲದೆ ಆಟಗಾರರ ಪಟ್ಟಿಯಲ್ಲಿಯೂ ನಂ.1 ಸ್ಥಾನ ಕಾಯ್ದುಕೊಂಡಿದೆ ಟಿ20 ಬ್ಯಾಟಿಂಗ್ನಲ್ಲಿ ಸೂರ್ಯಕುಮಾರ್ ಯಾದವ್, ಏಕ ದಿನ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್, ಟೆಸ್ಟ್ ಆಲ್ರೌಂಡರ್ನಲ್ಲಿ ರವೀಂದ್ರ ಜಡೇಜಾ ನಂ.1 ಸ್ಥಾನ ಅಲಂಕರಿಸಿದ್ದಾರೆ.