ದುಬೈ: ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮುಕ್ತಾಯದ ಬೆನ್ನಲ್ಲೇ ಐಸಿಸಿ(ICC Rankings) ನೂತನ ಟೆಸ್ಟ್ ಕ್ರಿಕೆಟ್ನ ಬ್ಯಾಟಿಂಗ್ ಮತ್ತು ಬೌಲಿಂಗ್(ICC Test Rankings) ಶ್ರೇಯಾಂಕ ಪಟ್ಟಿಯನ್ನು(ICC Test Rankings) ಪ್ರಕಟಿಸಿದೆ. ಕಳೆದ ನಾಲ್ಕು ತಿಂಗಳಿನಿಂದ ಕ್ರಿಕೆಟ್ ಆಡದೆ ನಂ.1 ಸ್ಥಾನ ಪಡೆದಿದ್ದ ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್(Kane Williamson) ನೂತನ ಶ್ರೇಯಾಂಕದಲ್ಲಿಯೂ ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಈ ಹಿಂದೆ 4 ಸ್ಥಾನ ಪ್ರಗತಿ ಕಂಡು ದ್ವಿತೀಯ ಸ್ಥಾನಕ್ಕೇರಿದ್ದ ಸ್ಟೀವನ್ ಸ್ಮಿತ್(Steven Smith) ಅವರು 2 ಸ್ಥಾನಗಳ ಕುಸಿತ ಕಂಡು ನಾಲ್ಕನೇ ಸ್ಥಾನ ಪಡೆದಿದಿದ್ದಾರೆ. ಟ್ರಾವಿಸ್ ಹೆಡ್(Travis Head) ಅವರು ದ್ವಿತೀಯ ಸ್ಥಾನ ಮತ್ತು ಪಾಕ್ ನಾಯಕ ಬಾಬರ್ ಅಜಂ(Babar Azam) ಉತ್ತಮ ಪ್ರಗತಿ ಕಾಣುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಆರ್. ಅಶ್ವಿನ್(Ravichandran Ashwin) ಅವರು 860 ರೇಟಿಂಗ್ ಅಂಕದೊಂದಿಗೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ವಿಂಡೀಸ್ ವಿರುದ್ಧ ಇಂದು(ಬುಧವಾರ ಜುಲೈ 12) ಆರಂಭಗೊಳ್ಳುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಆಡುವ ಸಾಧ್ಯತೆ ಇದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಅಶ್ವಿನ್ ಅವರ ಅಗ್ರಸ್ಥಾನ ಮತ್ತಷ್ಟು ಗಟ್ಟಿಗೊಳ್ಳಲಿದೆ. ದ್ವಿತೀಯ ಸ್ಥಾನದಲ್ಲಿ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಕಾಣಿಸಿಕೊಂಡಿದ್ದಾರೆ.
ಕಾರು ಅಪಘಾತದಲ್ಲಿ ಗಾಯಗೊಂಡು ಸುಮಾರು 7 ತಿಂಗಳಿನಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ರಿಷಭ್ ಪಂತ್(Rishabh Pant) ಅವರು ಟಾಪ್ ಟೆನ್ನಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಸದ್ಯ ಅವರು 758 ರೇಟಿಂಗ್ ಅಂಕದೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಪಂತ್ ಹೊರತುಪಡಿಸಿ ಉಳಿದ ಯಾವುದೇ ಟೀಮ್ ಇಂಡಿಯಾ ಬ್ಯಾಟರ್ ಕೂಡ ಅಗ್ರ 10ರೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇದನ್ನೂ ಓದಿ Ashes 2023: ಆ್ಯಶಸ್ ಟೆಸ್ಟ್ ಸರಣಿಯಿಂದ ಹೊರಬಿದ್ದ ನಥಾನ್ ಲಿಯೋನ್
ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದ ಕಾರಣ ಸ್ಟೀವನ್ ಸ್ಮಿತ್ ಅವರು ಶ್ರೇಯಾಂಕದಲ್ಲಿ ಕುಸಿತ ಕಂಡರು. ಈ ಲಾಭ ಪಾಕ್ ನಾಯಕ ಬಾಬರ್ ಅಜಂಗೆ ದೊರಕಿತು. 6ನೇ ಸ್ಥಾನದಲ್ಲಿದ್ದ ಅವರು 3 ಸ್ಥಾನ ಏರಿಕೆ ಕಾಣುವ ಮೂಲಕ ಮೂರನೇ ಸ್ಥಾನ ಪಡೆದರು. ಆಲ್ ರೌಂಡರ್ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ(Ravindra Jadeja) ಅಗ್ರ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಬೌಲಿಂಗ್ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ 9ನೇ ಸ್ಥಾನದಲ್ಲಿದ್ದಾರೆ. ವಿಂಡೀಸ್ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದರೆ ರವೀಂದ್ರ ಜಡೇಜಾಗೆ ತಮ್ಮ ಶ್ರೇಯಾಂಕವನ್ನು ಉತ್ತಮಗೊಳಿಸುವ ಅವಕಾಶವಿದೆ.