ದುಬೈ: ಐಸಿಸಿ ನೂತನ ಏಕದಿನ ಬ್ಯಾಟಿಂಗ್ ಶ್ರೇಯಾಂಕ(ICC Rankings) ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಐರ್ಲೆಂಡ್ ತಂಡದ ಆಟಗಾರ ಹ್ಯಾರಿ ಟೆಕ್ಟರ್(Harry Tector) ಅವರು ಜೀವನಶ್ರೇಷ್ಠ ಪ್ರಗತಿ ಕಾಣುವ ಮೂಲಕ ಟೀಮ್ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರನ್ನು ಹಿಂದಿಕ್ಕಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ 140 ರನ್ ಬಾರಿಸಿದ ಪರಿಣಾಮ ಹ್ಯಾರಿ ಟೆಕ್ಟರ್ ಅವರು ಶ್ರೇಯಾಂಕ ಪಟ್ಟಿಯಲ್ಲಿ ಜಿಗಿತ ಕಂಡರು. ಸದ್ಯ ಅವರು 722 ರೇಟಿಂಗ್ ಅಂಕದೊಂದಿಗೆ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಗ್ರಸ್ಥಾನದಲ್ಲಿ ಪಾಕ್ ತಂಡದ ನಾಯಕ ಬಾಬರ್ ಅಜಂ, ದ್ವಿತೀಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ರಸ್ಸಿ ವಾನ್ಡರ್ ಡುಸ್ಸೆನ್ ಮತ್ತು ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಪಾಕ್ ಆಟಗಾರರಾದ ಫಕಾರ್ ಜಮಾನ್ ಹಾಗು ಇಮಾಮ್ ಉಲ್-ಹಕ್ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಅಗ್ರ 10ರೊಳಗೆ ಮೂವರು ಪಾಕ್ ಆಟಗಾರರು ಸ್ಥಾನಪಡೆದು ಪಾರಮ್ಯ ಮರೆದಿದ್ದಾರೆ.
ಟೀಮ್ ಇಂಡಿಯಾದದ ಯುವ ಆಟಗಾರ ಶುಭಮನ್ ಗಿಲ್ ಅವರು 5ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ 8ನೇ, ರೋಹಿತ್ ಶರ್ಮ 10ನೇ ಸ್ಥಾನ ಗಳಿಸಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಮೊಹಮ್ಮದ್ ಸಿರಾಜ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸೀಸ್ ತಂಡದ ವೇಗಿ ಜೋಶ್ ಹ್ಯಾಜಲ್ವುಡ್ ಅಗ್ರ ಸ್ಥಾನ ಪಡೆದಿದ್ದಾರೆ. ಸಿರಾಜ್ ಬಿಟ್ಟು ಉಳಿದ ಯಾವುದೇ ಟೀಮ್ ಇಂಡಿಯಾದ ಬೌಲರ್ಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಟಿ20,ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ನಂ.1
ಟಿ20 ಶ್ರೇಯಾಂಕದಲ್ಲಿ ಭಾರತ ತಂಡ ನಂ.1 ಸ್ಥಾನ ಪಡೆದಿದೆ. ಸದ್ಯ ಭಾರತ 267 ರೇಟಿಂಗ್ ಅಂಕ ಪಡೆದಿದೆ. ದ್ವಿತೀಯ ಸ್ಥಾನದಲ್ಲಿ ವಿಶ್ವ ವಿಜೇತ ಇಂಗ್ಲೆಂಡ್ ತಂಡ ಕಾಣಿಸಿಕೊಂಡಿದೆ. ಇಂಗ್ಲೆಂಡ್ 259 ರೇಟಿಂಗ್ ಅಂಕ ಹೊಂದಿದೆ. ನ್ಯೂಜಿಲ್ಯಾಂಡ್ ಮೂರನೇ ಸ್ಥಾನದಲ್ಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿಯೂ ಭಾರತ ನಂ.1 ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಏಕದಿನ ಶ್ರೇಯಾಂದಲ್ಲಿ ಭಾರತ 115 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.