Site icon Vistara News

ICC Rankings: ಬರೋಬ್ಬರಿ 1,739 ದಿನಗಳ ಬಳಿಕ ಶ್ರೇಯಾಂಕದಲ್ಲಿ ಕುಸಿತ ಕಂಡ ಶಕೀಬ್

Shakib Al Hasan

ದುಬೈ: ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿ ಪ್ರಕಟಗೊಂಡಿದೆ. ಆಲ್​ರೌಂಡರ್​ಗಳ(No.1 ODI all-rounder) ಶ್ರೇಯಾಂಕದಲ್ಲಿ ಅಫಘಾನಿಸ್ತಾನದ ಹಿರಿಯ ಆಟಗಾರ ಮೊಹಮ್ಮದ್​ ನಬಿ(Mohammad Nabi) ಅವರು ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಬರೋಬ್ಬರಿ 1739 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ಧ ಬಾಂಗ್ಲಾದೇಶದ ಶಕೀಬ್​ ಅಲ್​ ಹಸನ್(Shakib Al Hasan) ಅವರನ್ನು ಹಿಂದಿಕ್ಕಿದ್ದಾರೆ. ಜತೆಗೆ ಈ ಸ್ಥಾನಕ್ಕೇರಿದ ಅತಿ ಹಿರಿಯ ಕ್ರಿಕೆಟಿಗ ಎಂಬ ಗೌರವಕ್ಕೂ ಪಾತ್ರರಾದರು.

ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ ಶತಕ ಮತ್ತು ಬೌಲಿಂಗ್​ನಲ್ಲಿ ತೋರಿದ ಶ್ರೇಷ್ಠ ಪ್ರದರ್ಶನದ ಕಾರಣ ನಬಿ ಅಗ್ರಸ್ಥಾನ ಪಡೆದರು. ಕಣ್ಣಿನ ಸಮಸ್ಯೆಯಿಂದಾಗಿ ಏಕದಿನ ವಿಶ್ವಕಪ್​ ಟೂರ್ನಿಯ ಬಳಿಕ ಶಬೀಬ್​ ಕ್ರಿಕೆಟ್​ನಿಂದ ದೂರ ಉಳಿದದ್ದು ಶ್ರೇಯಾಂಕ ಹಿನ್ನಡೆಗೆ ಕಾರಣ.

ಶಕೀಬ್ ಅಲ್​ ಹಸನ್​ ಅವರು ಮೇ 7, 2019 ರಿಂದ ಸತತ 1,739 ದಿನಗಳ ತನಕ ಏಕದಿನ ಆಲ್​ರೌಂಡರ್​ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರು. ಈ ಮೂಲಕ ಅತಿ ದೀರ್ಘ ಅವಧಿಗೆ ಈ ಸ್ಥಾನ ಉಳಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಹೊಂದಿದ್ದರು. ಸದ್ಯ ಶಕೀಬ್​ 310 ರೇಟಿಂಗ್​ ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

ಟೆಸ್ಟ್​ ಆಲ್​ರೌಂಡರ್​ಗಳ ಶ್ರೇಯಾಂಕದಲ್ಲಿ ಟೀಮ್​ ಇಂಡಿಯಾದ ರವೀಂದ್ರ ಜಡೇಜ ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಟಿ20 ರೌಂಡರ್​ಗಳ ಶ್ರೇಯಾಂಕದಲ್ಲಿ ಶಕೀಬ್​ ಅಲ್​ ಹಸನ್ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ R Ashwin: ದಾಖಲೆ ಬರೆಯಲು ಅಶ್ವಿನ್​ಗೆ ಬೇಕಿದೆ ಕೇವಲ ಒಂದು ವಿಕೆಟ್!​

ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ಶಕೀಬ್


ಬಾಂಗ್ಲಾ ನಾಯಕ ಶಕೀಬ್ ಅವರ ಎಡಗಣ್ಣಿನ ರೆಟಿನಾದಲ್ಲಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2023ರ ಏಕದಿನ ವಿಶ್ವಕಪ್‌ನ ನಂತರ ಶಕೀಬ್, ಕಣ್ಣಿನಲ್ಲಿ ಸಮಸ್ಯೆ ಇರುವ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಅದನ್ನು ನೇತ್ರ ತಜ್ಞ ವೈದರ ಬಳಿ ತೊರಿಸಲಾಗಿತ್ತು. ಈ ವೇಳೆ ಅವರ ರೆಟಿನಾದಲ್ಲಿ ಸಮಸ್ಯೆ ಇದೆ ಎಂಬುದು ಬೆಳಕಿಗೆ ಬಂದಿದೆ.

ಈ ಕುರಿತು ಬಿಸಿಬಿಯ ಹಿರಿಯ ವೈದ್ಯ ದೇಬಾಶಿಶ್ ಚೌಧರಿ ಮಾಹಿತಿ ನೀಡಿದ್ದು, ಶಕೀಬ್ ಎಡಗಣ್ಣಿನ ಎಕ್ಸ್‌ಟ್ರಾಫೋವಲ್ ಸೆಂಟ್ರಲ್ ಸೆರೋಸ್ ಕೊರಿಯೊ ರೆಟಿನೋಪತಿ (ಸಿಎಸ್‌ಆರ್) ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡ ದೇಬಾಶಿಶ್ ಚೌಧರಿ, ಸೆಂಟ್ರಲ್ ಸೆರೋಸ್ ಕೊರಿಯೊ ರೆಟಿನೋಪತಿ ಸಮಸ್ಯೆಗೆ ತುತ್ತಾಗುವ ವ್ಯಕ್ತಿಯ ಕಣ್ಣುಗಳ ರೆಟಿನಾದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆ ವ್ಯಕ್ತಿಯ ದೃಷ್ಟಿ ಅಡಚಣೆಗಳಿಗೆ ಕಾರಣವಾಗುತ್ತದೆ ಎಂದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಕೀಬ್ ಸಿಂಗಾಪುರಕ್ಕೆ ತೆರಳುವ ಸಾಧ್ಯತೆ ಇದೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಶಬೀಕ್​ ಆಡುವುದು ಅನುಮಾನ.

ಏಕದಿನ ಶ್ರೇಯಾಂಕ


ನಂಬರ್ 1 ಬ್ಯಾಟರ್​: ಬಾಬರ್ ಅಜಂ (ಪಾಕಿಸ್ತಾನ)

ನಂಬರ್ 1 ಬೌಲರ್​​: ಕೇಶವ್ ಮಹಾರಾಜ್ (ದಕ್ಷಿಣ ಆಫ್ರಿಕಾ)

ನಂಬರ್ 1 ಆಲ್​ರೌಂಡರ್​: ಮೊಹಮ್ಮದ್ ನಬಿ (ಅಫಘಾಸ್ತಾನ)

ಟಿ20 ಶ್ರೇಯಾಂಕ


ನಂಬರ್ 1 ಬ್ಯಾಟರ್​: ಸೂರ್ಯಕುಮಾರ್ ಯಾದವ್ (ಭಾರತ)

ನಂಬರ್ 1 ಬೌಲರ್​​: ಆದಿಲ್ ರಶೀದ್ (ಇಂಗ್ಲೆಂಡ್)

ನಂಬರ್ 1 ಆಲ್​ರೌಂಡರ್: ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)

ಟೆಸ್ಟ್ ಶ್ರೇಯಾಂಕ


ನಂಬರ್ 1 ಬ್ಯಾಟರ್​: ಕೇನ್ ವಿಲಿಯಮ್ಸ್​ (ನ್ಯೂಜಿಲ್ಯಾಂಡ್​)

ನಂಬರ್ 1 ಬೌಲರ್​​: ಜಸ್​ಪ್ರೀತ್ ಬುಮ್ರಾ (ಭಾರತ)

ನಂಬರ್ 1 ಆಲ್​ರೌಂಡರ್​: ರವೀಂದ್ರ ಜಡೇಜಾ (ಭಾರತ)

Exit mobile version