ದುಬೈ: ಐಸಿಸಿ ನೂತನ ಏಕದಿನ ಶ್ರೇಯಾಂಕದಲ್ಲಿ(ICC Rankings) ಪಾಕಿಸ್ತಾನ ತಂಡ ಭಾರಿ ಪ್ರಗತಿ ಸಾಧಿಸುವ ಮೂಲಕ ನಂ.1 ಸ್ಥಾನ ಅಲಂಕರಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ತವರಿನ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಬಾಬರ್ ಅಜಂ ಪಡೆ ಭರ್ಜರಿ ಗೆಲುವು ಸಾಧಿಸಿಸುವ ಮೂಲಕ ಈ ಸಾಧನೆ ಮಾಡಿದೆ. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಪಾಕ್ 4-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿದೆ. ಅಂತಿಮ ಪಂದ್ಯದಲ್ಲಿಯೂ ಗೆದ್ದರೆ ಕಿವೀಸ್ ವೈಟ್ ವಾಶ್ ಆಗಲಿದೆ.
ಕಿವೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡ ಏಕದಿನ ಶ್ರೆಯಾಂಕ ಪಟ್ಟಿಯಲ್ಲಿ 106 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿತ್ತು. ಆದರೆ ಸರಣಿಯ ಮೊದಲ ನಾಲ್ಕು ಪಂದ್ಯದಲ್ಲಿ ಕಿವೀಸ್ ವಿರುದ್ಧ ಅಮೋಘ ಗೆಲುವು ಸಾಧಿಸಿದ ಪರಿಣಾಮ 4 ಸ್ಥಾನಗಳ ಏರಿಕೆ ಕಾಣುವ ಮೂಲಕ ಅಗ್ರ ಸ್ಥಾನ ಅಲಂಕರಿಸಿದೆ. ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ದ್ವಿತೀಯ ಸ್ಥಾನಕ್ಕೆ ಜಾರಿದೆ. ಭಾರತ ಮೂರನೇ ಸ್ಥಾನ ಪಡೆದಿದೆ. ಸದ್ಯ ಪಾಕ್ 113 ಅಂಕ ಪಡೆದಿದೆ.
ಏಕದಿನ ವಿಶ್ವಕಪ್ ವರ್ಷದಲ್ಲಿ ಪಾಕಿಸ್ತಾನ ತಂಡ ನಂಬರ್ 1 ಶ್ರೇಯಾಂಕ ಪಡೆದಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ. ಪಾಕಿಸ್ತಾನ ತಂಡ ಇತ್ತೀಚಿನ ದಿನಗಳಲ್ಲಿ ಸೀಮಿತ ಓವರ್ಗಳ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ಪ್ರದರ್ಶನ ನೀಡುತ್ತಲೇ ಬಂದಿದೆ. ತಂಡದ ನಾಯಕ ಬಾಬರ್ ಅಜಂ ಕೂಡ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಇನಿಂಗ್ಸ್ನಲ್ಲಿ 5 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಸದ್ಯ ಪಾಕ್ ತಂಡದ ಈ ಶ್ರೇಷ್ಠ ಪ್ರದರ್ಶನವನ್ನು ಗಮನಿಸುವಾಗ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ನಲ್ಲಿ ಪ್ರಬಲ ಪೈಪೋಟಿ ನೀಡಿವ ಸೂಚನೆಯೊಂದು ದೊರೆತಂತಿದೆ.
ಇದನ್ನೂ ಓದಿ ICC T20 Ranking: ನಂ.1 ಸ್ಥಾನ ಉಳಿಸಿಕೊಂಡ ಸೂರ್ಯಕುಮಾರ್ ಯಾದವ್
ಪಾಕಿಸ್ತಾನ ಮತ್ತು ಕಿವೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯ ಭಾನುವಾರ ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿಯೂ ಪಾಕ್ ಗೆದ್ದರೆ ಶ್ರೇಯಾಂಕ ಪಟ್ಟಿಯಲ್ಲಿ ಅಂಕ ಹೆಚ್ಚಳವಾಗಲಿದೆ.