ಸಿಡ್ನಿ : ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಏಷ್ಯಾ ಕಪ್ ಪಂದ್ಯ ನಡೆಯಲು ಇನ್ನೂ ಮೂರು ದಿನಗಳು ಬಾಕಿ ಇವೆ. ಆಗಸ್ಟ್ ೨೮ರಂದು ಭಾನುವಾರ ಇತ್ತಂಡಗಳ ನಡುವೆ ಹೈವೋಲ್ಟೇಜ್ ಹಣಾಹಣಿ ನಡೆಯಲಿದೆ. ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಆಯೋಜನೆಗೊಂಡಿರುವ ಈ ಪಂದ್ಯವನ್ನು ನೋಡಲು ವಿಶ್ವದ ಕ್ರಿಕೆಟ್ ಪ್ರೇಮಿಗಳು ಕೌತುಕದಿಂದ ಕಾಯುತ್ತಿದ್ದಾರೆ. ಇದು ಏಷ್ಯಾ ಕಪ್ ಮಾತಾಯಿತು. ಆದರೆ, ಅಕ್ಟೋಬರ್‌ನಲ್ಲಿ ಈ ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ನಡುವೆ ಟಿ೨೦ ವಿಶ್ವ ಕಪ್‌ನ (T20 World Cup) ಪಂದ್ಯ ನಡೆಯಲಿದೆ. ಅದರ ಸ್ಟಾಂಡಿಂಗ್ ಟಿಕೆಟ್ ಅನ್ನು ಗುರುವಾರ ಐಸಿಸಿ ಬಿಡುಗಡೆ ಮಾಡಿದೆ. ಇದರ ಸಾಮಾನ್ಯ ವಿಭಾಗದ ಟಿಕೆಟ್ ಅನ್ನು ಕಳೆದ ಫೆಬ್ರವರಿಯಲ್ಲೇ ಬಿಡುಗಡೆ ಮಾಡಲಾಗಿತ್ತು. ಅಚ್ಚರಿಯೆಂದರೆ ವಿತರಣೆ ಆರಂಭಗೊಂಡ ಐದನೇ ನಿಮಿಷದಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿತ್ತು.
ಅಸ್ಟ್ರೇಲಿಯಾದ ಪ್ರತಿಷ್ಠಿತ ಎಮ್‌ಸಿಜಿ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಭಾರತ ಹಾಗೂ ಪಾಕ್ ನಡುವಿನ ಗುಂಪು ಹಂತದ ಹಣಾಹಣಿ ನಡೆಯಲಿದೆ. ಅಕ್ಟೋಬರ್ ೨೩ರಂದು ನಿಗದಿಯಾಗಿರುವ ಸಾಮಾನ್ಯ ಗ್ಯಾಲರಿಯ ಟಿಕೆಟ್ ಅನ್ನು ಕಳೆದ ಫೆಬ್ರವರಿಯಲ್ಲಿ ಐಸಿಸಿ ಮಾರಾಟ ಮಾಡಿತ್ತು. ಆದರೆ, ಇನ್ನೇನು ವಿತರಣೆ ಆರಂಭಿಸಿ ತಿರುಗಿ ನೋಡುವಷ್ಟರಲ್ಲಿ ಟಿಕೆಟ್‌ಗಳು ಖಾಲಿಯಾಗಿದ್ದವು. ಇದೀಗ ಟಿಕೆಟ್ ಬ್ಲ್ಯಾಕ್‌ನಲ್ಲಿ ಮಾರಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಗುರುವಾರ ಐಸಿಸಿ ಸ್ಟಾಡಿಂಗ್ ಟಿಕೆಟ್‌ನ ಮಾರಾಟ ಶುರು ಮಾಡಿದೆ. ಈ ವಿಭಾಗದಲ್ಲಿ ೪೦೦೦ ಟಿಕೆಟ್‌ಗಳಿದ್ದು, ಒಂದು ಟಿಕೆಟ್‌ಗೆ ೩೦ ಆಸ್ಟ್ರೇಲಿಯಾ ಡಾಲರ್ (೧೭೦೦ ರೂಪಾಯಿ) ನಿಗದಿ ಮಾಡಲಾಗಿದೆ. ಸೀಮಿತ ಸಂಖ್ಯೆ ಟಿಕೆಟ್‌ಗಳಿದ್ದು, ಮೊದಲ ಬಂದವರಿಗೆ ಆದ್ಯತೆ ಮೇರೆಗೆ ಟಿಕೆಟ್ ನೀಡಲಾಗುವುದು ಎಂದು ಐಸಿಸಿ ಹೇಳಿದೆ.
“ಕ್ರಿಕೆಟ್ ಪ್ರೇಮಿಗಳಿಗೆ ಈ ಪಂದ್ಯವನ್ನು ವೀಕ್ಷಣೆ ಮಾಡಲು ಅವಕಾಶ ಒದಗಿಸುವುದೇ ನಮ್ಮ ಗುರಿ. ಅಂತೆಯೇ ಇದೀಗ ಉಳಿದಿರುವ ಟಿಕೆಟ್‌ಗಳನ್ನು ಮಾರಲು ಆರಂಭಿಸಿದ್ದೇವೆ,” ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.
ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಯೋಜಕರು ಟಿಕೆಟ್ ಮರು ಮಾರಾಟ ಕೌಂಟರ್ ಕೂಡ ಆರಂಭಿಸಿದ್ದಾರೆ.
“ವಿಶ್ವದ ಅತ್ಯಂತ ರೋಚಕ ಕ್ರಿಕೆಟ್ ಪಂದ್ಯಗಳಲ್ಲಿ ಒಂದಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹಣಾಹಣಿಯ ಟಿಕೆಟ್ ಇನ್ನೂ ಲಭ್ಯವಿದೆ. ಪ್ರೇಕ್ಷಕರು ಟಿಕೆಟ್ ಖರೀದಿ ಮಾಡಬಹುದು,” ಎಂದು ಐಸಿಸಿ ಹೇಳಿದೆ.
ಇದೇ ವೇಳೆ ನವೆಂಬರ್ ೧೩ರಂದು ಅದೇ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಟಿಕೆಟ್ ಕೂಡ ಲಭ್ಯವಿದೆ,” ಎಂದು ಹೇಳಿದೆ.
ಇದನ್ನೂ ಓದಿ | Team India | ಟಿ20 ವಿಶ್ವ ಕಪ್ ಆಡಲು ನಾನು ಸಿದ್ಧ ಎಂದು ಸಂದೇಶ ರವಾನಿಸಿದ ಭಾರತದ ವೇಗಿ