Site icon Vistara News

World Cup 2023 : ವಿಶ್ವ ಕಪ್‌ಗೆ ತಂಡದ ಆಟಗಾರರ ಪಟ್ಟಿ ಸಲ್ಲಿಸಲು ಕೊನೇ ದಿನ ಪ್ರಕಟಿಸಿದ ಐಸಿಸಿ

Team India

#image_title

ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್‌ಗೆ ತಮ್ಮತಮ್ಮ ತಂಡಗಳ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಆಗಸ್ಟ್ 29ಕ್ಕೆ ಕೊನೇ ದಿನಾಂಕ ಎಂದು ಐಸಿಸಿ ಗಡುವು ಕೊಟ್ಟಿದೆ. ಈ ಮೂಲಕ ಭಾಗವಹಿಸುವ ಎಲ್ಲಾ ತಂಡಗಳು ಮೆಗಾ ಈವೆಂಟ್‌ಗೆ ತಮ್ಮ ತಂಡಗಳ ಆಟಗಾರರನ್ನು ನಿಗದಿಪಡಿಸಲು ಇನ್ನು ಕೇವಲ 2 ತಿಂಗಳು ಮಾತ್ರ ಬಾಕಿ ಉಳಿದಿವೆ.

ಟೂರ್ನಿ ಆರಂಭಕ್ಕೆ 30 ದಿನಗಳ ಮೊದಲು ಆಟಗಾರರ ಪಟ್ಟಿಯನ್ನು ನಮಗೆ ಸಲ್ಲಿಸಬೇಕಾಗುತ್ತದೆ. ಪಂದ್ಯಾವಳಿಗಳಿಗೆ ಒಂದು ವಾರದ ಮೊದಲು ಬೆಂಬಲ ಅವಧಿ ಪ್ರಾರಂಭವಾಗಬಹುದು. ಯಾವುದೇ ಅನುಮತಿ ಪಡೆಯದೆ ಬೆಂಬಲ ಅವಧಿಗೆ ಮುಂಚಿತವಾಗಿ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಬಹುದು. ಬೆಂಬಲ ಅವಧಿ ಪ್ರಾರಂಭವಾದ ನಂತರ ತಂಡಗಳ ಆಟಗಾರರನ್ನು ಬದಲಿಸಲು ತಾಂತ್ರಿಕ ಸಮಿತಿಯ ಒಪ್ಪಿಗೆ ಬೇಕಾಗುತ್ತದೆ ಎಂದು ಐಸಿಸಿ ಮೂಲಗಳು ತಿಳಿಸಿವೆ ಎಂದು ಕ್ರೀಡಾ ವೆಬ್‌ಸೈಟ್‌ ಒಂದು ವರದಿ ಮಾಡಿದೆ.

ಐಸಿಸಿ ಕರಡು ವೇಳಾಪಟ್ಟಿಯ ಪ್ರಕಾರ, ಪಂದ್ಯಾವಳಿಯು ಅಕ್ಟೋಬರ್ 5ರಿಂದ ಪ್ರಾರಂಭವಾಗಲಿದೆ. ಆದ್ದರಿಂದ ತಂಡಗಳು ವಿಶ್ವ ಕಪ್‌ ಪ್ರಾರಂಭಕ್ಕೆ 5 ವಾರಗಳ ಮೊದಲು ಐಸಿಸಿಗೆ ಪಟ್ಟಿ ಸಲ್ಲಿಸಬೇಕಾಗುತ್ತದೆ. ಐಸಿಸಿ ನಿಯಮಗಳ ಪ್ರಕಾರ, ಬೆಂಬಲ ಅವಧಿ ಪ್ರಾರಂಭವಾಗುವ ಒಂದು ತಿಂಗಳ ಮೊದಲು ತಂಡದ ಪಟ್ಟಿಯ ಸಲ್ಲಿಕೆ ಮಾಡಬೇಕು. ವಿಶ್ವ ಕಪ್‌ಗೆ ಒಂದು ವಾರ ಮುಂಚಿತವಾಗಿ ಬೆಂಬಲ ಅವಧಿ ಪ್ರಾರಂಭವಾಗುತ್ತದೆ.

ಐಸಿಸಿಯ ಸೂಚನೆ ಹಿನ್ನೆಲೆಯಲ್ಲಿ ಬಿಸಿಸಿಐ ಭಾರತ ತಂಡವನ್ನು ರಚಿಸಲು ಈಗಲೇ ಕಾರ್ಯಪ್ರವೃತ್ತವಾಗಬೇಕಾಗುತ್ತದೆ. ಆಗಸ್ಟ್ 29 ಐಸಿಸಿ ನಿಗದಿಪಡಿಸಿದ ಗಡುವಾಗಿದ್ದು ಅದಕ್ಕಿಂತ ಮೊದಲ ಪಟ್ಟಿಯಲ್ಲಿ ನೀಡಬೇಕಾಗುತ್ತದೆ. ಬಿಸಿಸಿಐ ಮತ್ತು ಆಯ್ಕೆದಾರರಿಗೆ ಈ ಕೆಲಸ ಸುಲಭವಲ್ಲ. ಮುಖ್ಯ ಆಯ್ಕೆಗಾರನ ಸೇರ್ಪಡೆಗೆ ಅರ್ಜಿ ಕರೆಯಲಾಗಿದ್ದು, ಅವರು ನೇಮಕಗೊಂಡ ಬಳಿಕ ಸಭೆ ನಡೆಸಬೇಕಾಗುತ್ತದೆ. ಈ ಸಮಿತಿ ಪಂದ್ಯಾವಳಿಯಲ್ಲಿ ಪ್ರಬಲ ಪ್ರದರ್ಶನ ನೀಡಬಲ್ಲ ಪರಿಪೂರ್ಣ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ.

ಜೂನ್‌ 27ರಂದು ವೇಳಾಪಟ್ಟಿ ಪ್ರಕಟ

ಜೂನ್ 27ರಂದು ಮುಂಬಯಿಯಲ್ಲಿ ಮುಂಬರುವ ವಿಶ್ವ ಕಪ್ ವೇಳಾಪಟ್ಟಿ ಪ್ರಕಟವಾಗಲಿದೆ. ಮೆಗಾ ಈವೆಂಟ್‌ಗೆ 100 ದಿನಗಳು ಬಾಕಿ ಇರುವಾಗ ಈ ವೇಳಾಪಟ್ಟಿ ಹೊರಬರಲಿದೆ. 50 ಓವರ್‌ಗಳ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ : 1983 World Cup: Indian Cricket Team’s Success Story

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗಳ ನಡುವಿನ ಮುಸುಕಿನ ಗುದ್ದಾಟವೇ ವೇಳಾಪಟ್ಟಿ ವಿಳಂಬವಾಗಲು ಕಾರಣ. ಮುಂಬರುವ ಏಷ್ಯಾ ಕಪ್‌ಗೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಹೇಳಿದೆ. ಇದು ಅಲ್ಲಿನ ಕ್ರಿಕೆಟ್‌ ಮಂಡಳಿಗೆ ಮುಖಭಂಗ ಉಂಟು ಮಾಡಿದೆ. ಇದಕ್ಕೆ ಪ್ರತಿಕಾರವಾಗಿ ಪಿಸಿಬಿ ವೇಳಾಪಟ್ಟಿಯಲ್ಲಿ ನಾನಾ ತಗಾದೆಗಳನ್ನು ತೆಗೆಯುತ್ತಿದೆ. ಸ್ಥಳ ಬದಲಾವಣೆ ಹಾಗೂ ಭದ್ರತೆಯ ನೆಪವೊಡ್ಡಿ ಕರುಪ್ರತಿಗೆ ಒಪ್ಪಿಗೆ ಕೊಡುತ್ತಿಲ್ಲ. ವಿದೇಶಾಂಗ ಸಚಿವಾಲಯ ಒಪ್ಪಿಗೆ ಕೊಟ್ಟಿಲ್ಲ ಎಂಬ ನೆಪ ಹೇಳುವ ಮೂಲಕವೂ ಅಡಚಣೆ ಉಂಟು ಮಾಡುತ್ತಿದೆ. ವಿಳಂಬದಿಂದಾಗಿ ಆಯೋಜಕರಾದ ಭಾರತಕ್ಕೆ ತೊಂದರೆ ಎದುರಾಗುತ್ತಿದೆ. ಒತ್ತಡಗಳ ನಡುವೆಯೂ ಬಿಸಿಸಿಐ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಬೇಡಿಕೆಗಳಿಗೆ ಮಣೆ ಹಾಕುತ್ತಿಲ್ಲ.

ಬುಮ್ರಾ ರೆಡಿ

ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್‌ಪ್ರಿತ್‌ ಬುಮ್ರಾ ವಿಶ್ವ ಕಪ್‌ಗೆ ಮುನ್ನ ಕಣಕ್ಕಿಳಿಯಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಬುಮ್ರಾ ಅವರು ಭಾರತ ತಂಡದ ಐರ್ಲೆಂಡ್ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವ ಕಪ್‌ಗೆ ಮುನ್ನ ಸಿದ್ಧಗೊಳ್ಳುವ ಉದ್ದೇಶ ಹೊಂದಿರುವ ಅವರು ಎನ್‌ಸಿಎನಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಬೆನ್ನು ನೋವಿನ ಕಾರಣಕ್ಕೆ ಬುಮ್ರಾ ಕಳೆದ ಸೆಪ್ಟೆಂಬರ್‌ನಿಂದ ಭಾರತ ತಂಡದಲ್ಲಿ ಆಡುತ್ತಿಲ್ಲ.

ಇದೇ ವೇಳೆ ರಿಷಭ್ ಪಂತ್ ಅತಿವೇಗದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಆದರೆ ಅವರು ವಿಶ್ವಕಪ್‌ಗೆ ಫಿಟ್ ಆಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಸ್ನಾಯು ಸೆಳೆತದಿಂದ ಬಳಲುತ್ತಿರುವ ಕೆಎಲ್ ರಾಹುಲ್ ಏಷ್ಯಾಕಪ್‌ಗೆ ಸಜ್ಜಾಗುವ ಲಕ್ಷಣ ತೋರಿದ್ದಾರೆ. ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶ್ರೇಯಸ್ ಅಯ್ಯರ್ ಏಷ್ಯಾಕಪ್‌ಗೆ ನೂರಕ್ಕೆ ನೂರರಷ್ಟು ಫಿಟ್ನೆಸ್ ಪಡೆಯುವ ಸಾಧ್ಯತೆ ಕಡಿಮೆ.

Exit mobile version