ದುಬೈ: ಐಸಿಸಿ ನೂತನ ರ‍್ಯಾಂಕಿಂಗ್(ICC T20 Ranking) ಪಟ್ಟಿ ಬುಧವಾರ ಬಿಡುಗಡೆಗೊಂಡಿದ್ದು ಟೀಮ್ ಇಂಡಿಯಾದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ನೂತನ ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮತ್ತು ಶತಕ ಸಿಡಿಸಿ ಮಿಂಚಿದ ಕಾರಣ ಸೂರ್ಯಕುಮಾರ್ ಯಾದವ್ 31 ಪಾಯಿಂಟ್ಸ್ ಸಂಪಾದಿಸಿದ್ದಾರೆ. ಇದರೊಂದಿಗೆ ಒಟ್ಟು 890 ಪಾಯಿಂಟ್ಸ್‌ಗಳೊಂದಿಗೆ 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮದ್ ರಿಜ್ವಾನ್‌ಗಿಂತಲೂ 54 ಹೆಚ್ಚು ಪಾಯಿಂಟ್ಸ್‌ಗಳನ್ನು ಕಲೆ ಹಾಕಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ.
ಟಿ20 ವಿಶ್ವ ಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದರು. ಆದರೆ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಆಡದ ಕಾರಣ ಅವರಿಗೆ ಹಿನ್ನಡೆಯಾಗಿದೆ. ಸದ್ಯ ವಿರಾಟ್ 11ರಿಂದ 13ನೇ ಸ್ಥಾನಕ್ಕೆ ಜಾರಿದ್ದಾರೆ. ಉಳಿದಂತೆ ನಾಯಕ ರೋಹಿತ್ ಶರ್ಮಾ ಮೂರು ಸ್ಥಾನ ಕುಸಿತ ಕಂಡು 21 ಸ್ಥಾನಕ್ಕಿಳಿದರೆ, ರಾಹುಲ್ ಎರಡು ಸ್ಥಾನ ಕಳೆದುಕೊಂಡು 19ನೇ ಸ್ಥಾನಕ್ಕಿಳಿದಿದ್ದಾರೆ. ಇಶಾನ್ ಕಿಶನ್ ಕೂಡಾ ಮೂರು ಸ್ಥಾನ ಕಳೆದುಕೊಂಡು 33ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಎರಡು ಸ್ಥಾನ ಮೇಲೇರಿ 11ನೇ ಸ್ಥಾನಕ್ಕೆ ಮತ್ತು ಎಡಗೈ ವೇಗಿ ಅರ್ಶ್ದೀಪ್ ಸಿಂಗ್ 21ನೇ ಸ್ಥಾನಕ್ಕೆ ಜಿಗಿದಿದ್ದಾರೆ. 8 ಸ್ಥಾನ ಜಿಗಿದಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸಧ್ಯ 40ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | Suryakumar Yadav | ಸೂರ್ಯಕುಮಾರ್ ಖರೀದಿಸುವಷ್ಟು ಹಣ ನಮ್ಮ ಬಳಿಯಿಲ್ಲ; ಮ್ಯಾಕ್ಸ್ವೆಲ್ ಹೀಗೆ ಹೇಳಿದ್ದು ಯಾಕೆ?