ದುಬೈ: ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಟಿ20 ಪಂದ್ಯಗಳು ಮುಕ್ತಾಯ ಕಂಡ ಬೆನ್ನಲ್ಲೇ ಇದೀಗ ಐಸಿಸಿ ನೂತನ ಟಿ20 ಶ್ರೇಯಾಂಕ(T20 Ranking) ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸದ್ಯ ಈ ನೂತನ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ 906 ರೇಟಿಂಗ್ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ವಿಪರ್ಯಾಸವೆಂದರೆ ಭಾರತದ ಯಾವುದೇ ಬೌಲರ್ ಅಗ್ರ 10 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.
ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (798 ರೇಟಿಂಗ್ ಪಾಯಿಂಟ್ಸ್) ಮತ್ತು ಬಾಬರ್ ಅಜಂ (769) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಏಡೆನ್ ಮಾರ್ಕ್ರಮ್(748) ಹಾಗೂ ರಿಲೀ ರುಸೊ (724) ಆ ಬಳಿಕದ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (15), ಕೆ.ಎಲ್ ರಾಹುಲ್(30), ರೋಹಿತ್ ಶರ್ಮ(32), ಶುಭಮನ್ ಗಿಲ್(39) ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರು ನಂ.1 ಸ್ಥಾನದಲ್ಲಿ ಕಾಣಿಸಿಕೊಂಡರೂ ಸದ್ಯ ಅವರು ಕಳಪೆ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಲಯ ಕಳೆದುಕೊಂಡ ಅವರು ಇದೀಗ ಐಪಿಎಲ್ನಲ್ಲಿಯೂ ಸತತ ವೈಫಲ್ಯ ಅನುಭವಿಸುತ್ತಲೇ ಬಂದಿದ್ದಾರೆ.
ಇದನ್ನೂ ಓದಿ IPL 2023: ಪಂಜಾಬ್ಗೆ ಚಾಲೆಂಜ್ ಮಾಡಲು ಸಜ್ಜಾದ ಆರ್ಸಿಬಿ
ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಫಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಮತ್ತು ಫಜಲ್‌ಹಕ್ ಫರೂಕಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ಮೂರನೇ, ಶ್ರೀಲಂಕಾದ ವನಿಂದು ಹಸರಂಗ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ 269 ಅಂಕಗಳೊಂದಿದೆ ಮೊದಲ ಸ್ಥಾನದಲ್ಲಿದ್ದು, ಹಾರ್ದಿಕ್ ಪಾಂಡ್ಯ 250 ಅಂಕಗಳಿಂದ ಎರಡನೇ ಸ್ಥಾನದಲ್ಲಿದ್ದಾರೆ.