ದುಬೈ: ವೆಸ್ಟ್ ಇಂಡೀಸ್ ವಿರುದ್ಧ ಸಾಗುತ್ತಿರುವ ಟಿ20 ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಯುವ ಎಡಗೈ ಬ್ಯಾಟರ್ ತಿಲಕ್ ವರ್ಮ(Tilak Varma), ನೂತನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ(ICC T20 Ranking) ಬರೋಬ್ಬರಿ 21 ಸ್ಥಾನಗಳ ಪ್ರಗತಿ ಸಾಧಿಸುವ ಮೂಲಕ ಜೀವನ ಶ್ರೇಷ್ಠ 46ನೇ ಸ್ಥಾನ ಪಡೆದಿದ್ದಾರೆ. ಆದರೆ ಇಶಾನ್ ಕಿಶನ್(Ishan Kishan) ಮತ್ತು ಶುಭಮನ್ ಗಿಲ್(Shubman Gill) ಕುಸಿತ ಕಂಡಿದ್ದಾರೆ.
ಚೊಚ್ಚಲ ಸರಣಿಯಲ್ಲೇ ಸಾಧನೆ
ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಸ್ಥಿರ ಪ್ರದರ್ಶನ ತೋರುವ ಮೂಲಕ ಟೀಮ್ ಇಂಡಿಯಾಕ್ಕೆ ಪದಾಪರ್ಣೆ ಮಾಡಿದ ತಿಲಕ್ ವರ್ಮಾ ವಿಂಡೀಸ್ ವಿರುದ್ಧ ಆಡಿದ ಮೂರು ಟಿ20 ಪಂದ್ಯಗಳಲ್ಲಿಯೂ ಕ್ರಮವಾಗಿ 39, 51, ಮತ್ತು 49* ರನ್ ಗಳಿಸಿ ಒಟ್ಟು 139ರನ್ ಗಳಿಸಿದ್ದಾರೆ. ಯುವರಾಜ್ ಸಿಂಗ್ ಅವರಂತೆ ಬ್ಯಾಟ್ ಬೀಸಬಲ್ಲ ಈ ಆಟಗಾರ ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನುಳಿದ ಎರಡು ಟಿ20 ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರಿದರೆ ಅವರ ಶ್ರೇಯಾಂಕದಲ್ಲಿ ಮತ್ತಷ್ಟು ಏರಿಕೆಯಾಗಲಿದೆ.
ಕೊಹ್ಲಿ,ರೋಹಿತ್ ಸ್ಥಾನ ಸ್ಥಿರ
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಇದುವರೆಗೆ ಟಿ20 ಪಂದ್ಯಗಳನ್ನು ಆಡದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಕೆ.ಎಲ್ ರಾಹುಲ್ ಅವರ ಶ್ರೇಯಾಂಕದ ಸ್ಥಿರವಾಗಿದೆ. ಕೊಹ್ಲಿ ಈ ಹಿಂದಿನಂತೆ 17 ನೇ ಸ್ಥಾನದಲ್ಲಿದ್ದರೆ. ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕ್ರಮವಾಗಿ 33 ಮತ್ತು 34ನೇ ಸ್ಥಾನದಲ್ಲಿದ್ದಾರೆ.
ಅಗ್ರಸ್ಥಾನ ಉಳಿಸಿಕೊಂಡ ಸೂರ್ಯಕುಮಾರ್
360 ಡಿಗ್ರಿ ಖ್ಯಾತಿಯಲ್ಲಿ ಬ್ಯಾಟಿಂಗ್ ನಡೆಸಬಲ್ಲ ಟೀಮ್ ಇಂಡಿಯಾದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಅವರು ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹಲವು ಸರಣಿಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಅವರು ಶ್ರೇಯಾಂಕದಲ್ಲಿ ಕುಸಿತ ಕಾಣುವ ಭೀತಿಯಲ್ಲಿದ್ದರು. ಆದರೆ ವಿಂಡೀಸ್ ವಿರುದ್ಧದ ಮೂರನೇ ಟಿ20ಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ 83 ರನ್ ಚಚ್ಚಿ ತಂಡದ ಗೆಲುವುನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಅವರ ರೇಟಿಂಗ್ ಅಂಕದಲ್ಲಿ ಸುಧಾರಣೆ ಕಂಡು ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಸದ್ಯ ಅವರ ರೇಟಿಂಗ್ ಅಂಕ 907. ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ರಶೀದ್ ಖಾನ್ ನಂ.1 ಬೌಲರ್
ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದುಕೊಳ್ಳಲು ಭಾರತೀಯ ಬೌಲರ್ಗಳು ವಿಫಲರಾಗಿದ್ದಾರೆ. ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಅವರು 621 ಅಂಕದೊಂದಿಗೆ 17ನೇ ಸ್ಥಾನ ಪಡೆದಿದ್ದಾರೆ. ಇದುವೇ ಭಾರತೀಯ ಬೌಲರ್ ಒಬ್ಬನ ಉತ್ತಮ ಸಾಧನೆಯಾಗಿದೆ. ಅಫಘಾನಿಸ್ತಾನದ ಅನುಭವಿ ಸ್ಪಿನ್ನರ್ ರಶೀದ್ ಖಾನ್, ಆಸೀಸ್ ತಂಡದ ಜೋಶ್ ಹ್ಯಾಜಲ್ವುಡ್ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ Tilak Varma: ಚೊಚ್ಚಲ ಅರ್ಧಶತಕದೊಂದಿಗೆ ಪಂತ್,ಸೂರ್ಯಕುಮಾರ್ ದಾಖಲೆ ಮುರಿದ ತಿಲಕ್ ವರ್ಮಾ
ಆಲ್ರೌಂಡರ್ಗಳ ವಿಚಾರದಕ್ಕೆ ಬರುವುದಾದರೆ ಟಿ20ಯಲ್ಲಿ ಸದ್ಯ ಭಾರತ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಅಗ್ರಸ್ಥಾನದಲ್ಲಿ ಬಾಂಗ್ಲಾದೇಶದ ಹಿರಿಯ ಸ್ಪಿನ್ನರ್ ಶಕೀಬ್ ಅಲ್-ಹಸನ್ ಕಾಣಿಸಿಕೊಂಡಿದ್ದಾರೆ.
ಕುಸಿತ ಕಂಡ ಇಶಾನ್-ಗಿಲ್
ಐಪಿಎಲ್ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಅವರು ವಿಂಡೀಸ್ ಟಿ20 ಸರಣಿಯಲ್ಲಿ ತೀರಾ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇವಲ ಒಂದಕಿಗೆ ಸೀಮಿತರಾಗಿ ತಮ್ಮ ಮೇಲಿಟ್ಟ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಇದೀಗ ಕಳಪೆ ಬ್ಯಾಟಿಂಗ್ನಿಂದಾಗಿ ಶ್ರೇಯಾಂಕದಲ್ಲಿಯೂ ಕುಸಿತ ಕಂಡಿದ್ದಾರೆ. ಇಶಾನ್ ಮೂರು ಸ್ಥಾನ ಕೆಳ ಜಾರಿ 54ನೇ ಸ್ಥಾನ, ಶುಭಮನ್ ಗಿಲ್ 11 ಸ್ಥಾನ ಕುಸಿತ ಕಂಡು 68ನೇ ಸ್ಥಾನ ಪಡೆದಿದ್ದಾರೆ.