Site icon Vistara News

ICC T20I Rankings: ಬೌಲಿಂಗ್​ ಶ್ರೇಯಾಂಕದಲ್ಲಿ ಜೀವನ ಶ್ರೇಷ್ಠ ಪ್ರಗತಿ ಸಾಧಿಸಿದ ಅಕ್ಷರ್​ ಪಟೇಲ್

Axar Patel

ದುಬೈ: ಅಫಘಾನಿಸ್ತಾನ ವಿರುದ್ಧ ಸಾಗುತ್ತಿರುವ ತವರಿನ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಅಕ್ಷರ್​ ಪಟೇಲ್(Axar Patel)​ ನೂತನ ಐಸಿಸಿ ಪುರುಷರ ಟಿ20(ICC T20I Rankings) ಬೌಲರ್‌ಗಳ ಶ್ರೇಯಾಂಕದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಐದನೇ ಸ್ಥಾನವನ್ನು ಪಡೆದಿದ್ದಾರೆ. ಬರೋಬ್ಬರಿ 12 ಸ್ಥಾನಗಳ ಏರಿಕೆ ಕಂಡು ಅವರು ಈ ಸಾಧನೆ ಮಾಡಿದ್ದಾರೆ.

ದ್ವಿತೀಯ ಟಿ20ಯಲ್ಲಿ ಅಜೇಯ ಅರ್ಧಶತಕ ಬಾರಿಸಿದ ಯಶಸ್ವಿ ಜೈಸ್ವಾಲ್(Yashasvi Jaiswal) ಮತ್ತು ಆಲ್​ರೌಂಡರ್​ ಪ್ರದರ್ಶನ ತೋರುತ್ತಿರುವ ಶಿವಂ ದುಬೆ ಕೂಡ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ. ಬ್ಯಾಟರ್​ಗಳ ಶ್ರೇಯಾಂಕದಲ್ಲಿ ಜೈಸ್ವಾಲ್​ 7 ಸ್ಥಾನಗಳ ಪ್ರಗತಿ ಕಂಡು 739 ರೇಟಿಂಗ್​ ಅಂಕದೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಶಿವಂ ದುಬೆ 207 ಸ್ಥಾನಗಳ ಏರಿಕೆ ಕಂಡು 58ನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ 44, ಗಿಲ್​ 60ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Team India: ಪಾಕಿಸ್ತಾನದ ದಾಖಲೆ ಮುರಿಯಲು ಸಜ್ಜಾದ ಟೀಮ್​ ಇಂಡಿಯಾ

ಸೂರ್ಯಕುಮಾರ್​ಗೆ ಅಗ್ರಸ್ಥಾನ


ಸರಿ ಸುಮಾರು ಒಂದು ವರ್ಷಗಳಿಂದ ಬ್ಯಾಟರ್​ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಹಾರ್ಡ್ ಹಿಟ್ಟರ್​ ಸೂರ್ಯಕುಮಾರ್​ ಯಾದವ್​ ಈ ಸ್ಥಾನದಲ್ಲೇ ಮುಂದುವರಿದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕಾಲಿಗೆ ಗಾಯಮಾಡಿಕೊಂಡ ಸೂರ್ಯ ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆಯ ಹಂತದಲ್ಲಿದ್ದಾರೆ. ಐಪಿಎಲ್​ನಲ್ಲಿ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ಇದೆ.

ಟಾಪ್​ 5 ಬ್ಯಾಟರ್​ಗಳ ಪಟ್ಟಿ


1. ಸೂರ್ಯಕುಮಾರ್​ ಯಾದವ್​ (869 ರೇಟಿಂಗ್​ ಅಂಕ)

2. ಫಿಲ್ ಸಾಲ್ಟ್​ (802 ರೇಟಿಂಗ್​ ಅಂಕ)

3. ಮೊಹಮ್ಮದ್​ ರಿಜ್ವಾನ್​ (775 ರೇಟಿಂಗ್​ ಅಂಕ)

4. ಬಾಬರ್​ ಅಜಂ (763 ರೇಟಿಂಗ್​ ಅಂಕ)

5. ಐಡೆನ್​ ಮಾರ್ಕ್ರಮ್​ (755 ರೇಟಿಂಗ್​ ಅಂಕ)

ಬೌಲಿಂಗ್​ ಶ್ರೇಯಾಂಕದಲ್ಲಿ ಇಂಗ್ಲೆಂಡ್​ನ ಸ್ಪಿನ್ನರ್​ ಆದೀಲ್​ ರಶೀದ್​ 726 ರೇಟಿಂಗ್​ ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವಿಂಡೀಸ್​ನ ಅಕಿಲ್​ ಹೊಸೇನ್​, ಲಂಕಾದ ವನಿಂದು ಹಸರಂಗ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆರನೇ ಸ್ಥಾನದಲ್ಲಿರುವ ಅಕ್ಷರ್​ ಪಟೇಲ್​ ಅಫಘಾನಿಸ್ತಾನ ವಿರುದ್ಧದ ಅಂತಿಮ ಪಂದ್ಯದಲ್ಲಿ ಆಡಿ ಹೆಚ್ಚಿನ ವಿಕೆಟ್​ ಕಿತ್ತರೆ ತಮ್ಮ ಶ್ರೇಯಾಂಕವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅವಕಾಶವಿದೆ.

ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಟೀಮ್​ ಇಂಡಿಯಾದ ಹಾರ್ದಿಕ್​ ಪಾಂಡ್ಯ ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾ ವಿರುದ್ಧದ ಲೀಗ್​ ಪಂದ್ಯದಲ್ಲಿ ಕಾಲಿನ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದಿದ್ದ ಪಾಂಡ್ಯ ಇದುವರೆಗೂ ಕ್ರಿಕೆಟ್​ ಆಡಿಲ್ಲ. ಸದ್ಯ ಅವರು ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ.

Exit mobile version