ದುಬೈ: ಬಾಂಗ್ಲಾದೇಶ ಮತ್ತು ಭಾರತ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯ ಕಂಡ ಬೆನ್ನಲ್ಲೇ ಐಸಿಸಿ ಟೆಸ್ಟ್ ಶ್ರೇಯಾಂಕವನ್ನು(ICC Test Ranking) ಬಿಡುಗಡೆ ಗೊಳಿಸಿದೆ. ನೂತನ ರ‍್ಯಾಂಕಿಂಗ್‌ನಲ್ಲಿ ಆರ್. ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಪ್ರಗತಿ ಸಾಧಿಸಿದ್ದಾರೆ. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ 2 ಸ್ಥಾನ ಕುಸಿತ ಕಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಅಜೇಯ 71 ರನ್ಗಳ ಜತೆಯಾಟ ನಡೆಸಿ ತಂಡದ ಗೆಲುವಿಗೆ ಪಾತ್ರರಾಗಿದ್ದರು. ಜತೆಗೆ ಈ ಪಂದ್ಯದಲ್ಲಿ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಅಯ್ಯರ್ ಕೂಡ ಈ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಈ ಅಮೋಘ ಪ್ರದರ್ಶನದಿಂದ ಉಭಯ ಆಟಗಾರರು ಶ್ರೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ.
ಶ್ರೇಯಸ್ ಅಯ್ಯರ್ 10 ಸ್ಥಾನಗಳ ಏರಿಕೆ ಕಂಡು ಸದ್ಯ 16ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವಿನ್ ಬೌಲಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ್ದು, ಟೆಸ್ಟ್ ಬೌಲಿಂಗ್ ಪಟ್ಟಿಯಲ್ಲಿ ಬುಮ್ರಾ ಅವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಬಾಂಗ್ಲಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ 2 ಸ್ಥಾನಗಳ ಕುಸಿತ ಕಂಡು 14ನೇ ಸ್ಥಾನ ಪಡೆದಿದ್ದಾರೆ. ಬ್ಯಾಟರ್ಗಳ ಯಾದಿಯಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಉಮೇಶ್ ಯಾದವ್ ಅಂತಿಮ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳನ್ನು ಉರುಳಿಸಿ ಬೌಲರ್ಗಳ ಪಟ್ಟಿಯಲ್ಲಿ 5 ಸ್ಥಾನ ಏರಿಕೆ ಕಂಡು 33 ನೇ ಸ್ಥಾನಕ್ಕೆ ತಲುಪಿದ್ದಾರೆ.
ಇದನ್ನೂ ಓದಿ | INDvsSL | ಲಂಕಾ ಸರಣಿಗೆ ಭಾರತ ತಂಡ ಪ್ರಕಟ, ಒಡಿಐನಲ್ಲಿ ರಾಹುಲ್ಗೆ ಚಾನ್ಸ್, ರೋಹಿತ್ ವಾಪಸ್