ದುಬೈ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿ ಗಮನಸೆಳೆದಿದ್ದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಐಸಿಸಿ(ICC ) ನೂತನ ಟೆಸ್ಟ್(ICC Test Rankings) ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಬುಮ್ರಾ ಟೆಸ್ಟ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದು ಇದೇ ಮೊದಲು.
ಕಳೆದ ವರ್ಷ ಮಾರ್ಚ್‌ನಿಂದ ಅಗ್ರಸ್ಥಾನದಲ್ಲಿದ್ದ ಸ್ಪಿನ್ನರ್ ಅಶ್ವಿನ್ ಅವರು ದ್ವಿತೀಯ ಟೆಸ್ಟ್ನಲ್ಲಿ ಹೆಚ್ಚಿನ ವಿಕೆಟ್ ಕೀಳಲು ವಿಫಲವಾದ ಕಾರಣ ನೂತನ ಶ್ರೇಯಾಂಕದಲ್ಲಿ ಎರಡು ಸ್ಥಾನಗಳ ಕುಸಿತದೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಎರಡನೇ ಸ್ಥಾನದಲ್ಲಿ ಉಳಿದಿದ್ದಾರೆ.
ಇತ್ತೀಚೆಗಷ್ಟೇ 150 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ವೇಗದ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬುಮ್ರಾ, ಇಂಗ್ಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ 32 ಓವರ್ ಬೌಲಿಂಗ್ ನಡೆಸಿ ಒಟ್ಟು 9 ವಿಕೆಟ್ ಉರುಳಿಸಿದ್ದರು. ಈ ಪ್ರದರ್ಶನದಿಂದ ಅವರು ಅಗ್ರಸ್ಥಾನ ಪಡೆದರು. ಸದ್ಯ ಅವರು 881 ರೇಟಿಂಗ್ ಅಂಕ ಹೊಂದಿದ್ದಾರೆ. ಇದಕ್ಕೂ ಮುನ್ನ ಅವರು 4ನೇ ಸ್ಥಾನದಲ್ಲಿದ್ದರು. ಮೂರು ಮಾದರಿಯ ಕ್ರಿಕೆಟ್ನಲ್ಲಿ ನಂ.1 ಸ್ಥಾನಕ್ಕೇರಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
India pacer tops the bowling charts in ICC Men’s Test Player Rankings for the first time 🤩https://t.co/FLqiGNGUTr
— ICC (@ICC) February 7, 2024
ಭಾರತ ಪರ 34 ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಮ್ರಾ 10 ಬಾರಿ ಐದು ವಿಕೆಟ್‌ಗಳನ್ನು ಕಿತ್ತ ಸಾಧನೆಗಳನ್ನು ಹೊಂದಿದ್ದರೂ ಸಹ ಬುಮ್ರಾ ಮೂರನೇ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆದಿಲ್ಲವಾಗಿತ್ತು. ಇದೀಗ ಮೊದಲ ಬಾರಿಗೆ ಅವರು ಟೆಸ್ಟ್ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IND vs ENG: ಉಳಿದ ಮೂರು ಟೆಸ್ಟ್ಗೆ ಇಂದು ಭಾರತ ತಂಡ ಪ್ರಕಟ; ಕೊಹ್ಲಿ, ರಾಹುಲ್ ಆಗಮನ?
ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತೀಯ ಬ್ಯಾಟರ್ಗಳು ಭಾರೀ ಪ್ರಗತಿ ಸಾಧಿಸಿಲ್ಲ. 2 ಪಂದ್ಯಗಳನ್ನು ಆಡದ ವಿರಾಟ್ ಕೊಹ್ಲಿ ಒಂದು ಸ್ಥಾನಗಳ ಇಳಿಕೆ ಕಂಡು 7ನೇ ಸ್ಥಾನ ಪಡೆದಿದ್ದಾರೆ. ರೋಹಿತ್ ಕೂಡ ಒಂದು ಸ್ಥಾನಗಳ ಕುಸಿತ ಕಂಡಿದ್ದಾರೆ.
ಒಂದು ಸ್ಥಾನ ಏರಿಕೆ ಕಂಡ ಪಂತ್
ಕಾರು ಅಪಘಾತದ ಬಳಿಕ ಸರಿ ಸುಮಾರು 1 ವರ್ಷಕ್ಕಿಂತಲೂ ಕ್ರಿಕೆಟ್ನಿಂದ ದೂರ ಉಳಿದಿರುವ ರಿಷಭ್ ಪಂತ್ ಅವರು ಅಚ್ಚರಿ ಎಂಬಂತೆ ಬ್ಯಾಟರ್ಗಳ ಶ್ರೇಯಾಂಕದಲ್ಲಿ ಒಂದು ಸ್ಥಾನ ಪ್ರಗತಿ ಸಾಧಿಸಿ 12ನೇ ಸ್ಥಾನ ಪಡೆದಿದ್ದಾರೆ. ಸದ್ಯ ಅವರ ರೇಟಿಂಗ್ ಅಂಕ 714. ಈ ಬಾರಿಯ ಐಪಿಎಲ್ ಟೂರ್ನಿ ಆಡುವ ಮೂಲಕ ಪಂತ್ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಭಾರತದ ವಿರುದ್ಧದ ಮೊದಲ 2 ಟೆಸ್ಟ್‌ಗಳಲ್ಲಿ ಎಡವಿದ ಜೋ ರೂಟ್ 1 ಸ್ಥಾನದಿಂದ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ಸ್ಥಾನಗಳ ಏರಿಕೆ ಕಂಡು ಕ್ರಮವಾಗಿ 4 ಮತ್ತು 5 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.