ದುಬೈ: ಆ್ಯಶಸ್ ಸರಣಿಯ ಮೊದಲ ಪಂದ್ಯ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೆಸ್ಟ್ ಶ್ರೇಯಾಂಕ(ICC Test Rankings) ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ನೂತನ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್(Joe Root) ಅವರು 5 ಸ್ಥಾನಗಳ ಪ್ರಗತಿ ಕಂಡು ಇದೀಗ ಅಗ್ರಸ್ಥಾನಕ್ಕೆ ನೆಗೆದಿದ್ದಾರೆ. ಈ ಹಿಂದೆ ಅಗ್ರ ಸ್ಥಾನ ಅಲಂಕರಿಸಿದ್ದ ಆಸೀಸ್ ತಂಡದ ಮಾರ್ನಸ್ ಲಬುಶೇನ್(Marnus Labuschagne) ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಆರ್. ಅಶ್ವಿನ್(Ravichandran Ashwin) ಅವರು ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಬುಧವಾರ ಬಿಡುಗಡೆಗೊಂಡ ಈ ಶ್ರೇಯಾಂಕ ಪಟ್ಟಿಯಲ್ಲಿ ಅನೇಕ ಮೇಜರ್ ಬದಲಾವಣೆಗಳು ಸಂಭವಿಸಿದೆ. ಭಾರತ ವಿರುದ್ಧದ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ತಕ್ಷಣ ಮೊದಲ ಮೂರು ಸ್ಥಾನ ಅಂಂಕರಿಸಿದ್ದ ಆಸೀಸ್ ಆಟಗಾರರು ನೂತನ ಪಟ್ಟಿಯಲ್ಲಿ ಕುಸಿತ ಕಂಡಿದ್ದಾರೆ. ಈ ಹಿಂದೆ ದ್ವಿತೀಯ ಸ್ಥಾನದಲ್ಲಿದ್ದ ಸ್ಟೀವನ್ ಸ್ಮಿತ್ 6ನೇ ಸ್ಥಾನಕ್ಕೆ ಜಾರಿದ್ದಾರೆ. ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ 883 ರೇಟಿಂಗ್ಸ್ ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಟ್ರಾವಿಸ್ ಹೆಡ್ ಕೂಡ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಟಾಪ್ 10ನಲ್ಲಿ ಪಂತ್
ಅಚ್ಚರಿ ಎಂದರೆ ಕಾರು ಅಪಘಾತದಲ್ಲಿ ಗಾಯಗೊಂಡು ಸುಮಾರು 6 ತಿಂಗಳಿನಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ರಿಷಭ್ ಪಂತ್(Rishabh Pant) ಅವರು ಟಾಪ್ ಟೆನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 758 ರೇಟಿಂಗ್ ಅಂಕದೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಸದ್ಯ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಂಡಿರುವ ಪಂತ್ ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ವರ್ಷಾರಂಭದಲ್ಲಿ ಅವರು ಮತ್ತೆ ಕ್ರಿಕೆಟ್ಗೆ ಮರಳುವ ಸಾಧ್ಯತೆ ಇದೆ. ಪಂತ್ ಹೊರತುಪಡಿಸಿ ಉಳಿದ ಯಾವುದೇ ಟೀಮ್ ಇಂಡಿಯಾ ಬ್ಯಾಟರ್ ಕೂಡ ಅಗ್ರ 10ರೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇದನ್ನೂ ಓದಿ Rishabh Pant: ಎನ್ಸಿಎ ಸೇರಿದ ರಾಹುಲ್ಗೆ ಸ್ವಾಗತಿಸಿದ ರಿಷಭ್ ಪಂತ್; ವೈರಲ್ ಆಯ್ತು ಟ್ವೀಟ್
ಆಸೀಸ್ ವಿರುದ್ಧದ ಟೆಸ್ಟ್ ಫೈನಲ್ನಲ್ಲಿ ಆಡಲು ಅವಕಾಶ ಸಿಗದಿದ್ದರೂ ಆರ್. ಅಶ್ವಿನ್ ಅವರು ಬೌಲಿಂಗ್ ಶ್ರೇಯಾಂಕದಲ್ಲಿ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಲ್ ರೌಂಡರ್ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ(Ravindra Jadeja) ಅಗ್ರ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಬೌಲಿಂಗ್ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿದ್ದಾರೆ.