ದುಬೈ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕ(ICC Test Rankings) ಪಟ್ಟಿಯನ್ನು ಪ್ರಕಟಿಸಿದೆ. ಅಚ್ಚರಿ ಎಂದರೆ ಕಳೆದ ನಾಲ್ಕು ತಿಂಗಳಿನಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ನ್ಯೂಜಿಲ್ಯಾಂಡ್ ತಂಡದ ಕೇನ್ ವಿಲಿಯಮ್ಸನ್(Kane Williamson) ಅವರು ಅಗ್ರ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಜೋ ರೂಟ್(Joe Root) 4 ಸ್ಥಾನಗಳ ಕುಸಿತ ಕಂಡು 5ನೇ ಸ್ಥಾನದಲ್ಲಿದ್ದಾರೆ. ಆಸೀಸ್ ತಂಡದ ಸ್ಟೀವನ್ ಸ್ಮಿತ್(Steven Smith) ಅವರು 4 ಸ್ಥಾನ ಪ್ರಗತಿ ಕಂಡು ದ್ವಿತೀಯ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಆರ್. ಅಶ್ವಿನ್(Ravichandran Ashwin) ಅವರು ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ 16ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಮೊಣಕಾಲಿಗೆ ಗಂಭೀರ ಗಾಯಗೊಂಡು ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆಯ ಹಾದಿಯಲ್ಲಿದ್ದಾರೆ. ಅಕ್ಟೋಬರ್ 5 ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಅವರು ಆಡುವುದು ಅನುಮಾನ ಎನ್ನಲಾಗಿದೆ.
ಇದನ್ನೂ ಓದಿ Viral Video: ಪುಟ್ಟ ಮಗಳೊಂದಿಗೆ ಕ್ರಿಕೆಟ್ ಆಡಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್
ಟಾಪ್ 10 ಸ್ಥಾನ ಉಳಿಸಿಕೊಂಡ ಪಂತ್
ಕಾರು ಅಪಘಾತದಲ್ಲಿ ಗಾಯಗೊಂಡು ಸುಮಾರು 7 ತಿಂಗಳಿನಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ರಿಷಭ್ ಪಂತ್(Rishabh Pant) ಅವರು ಟಾಪ್ ಟೆನ್ನಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಸದ್ಯ ಅವರು 758 ರೇಟಿಂಗ್ ಅಂಕದೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಂಡಿರುವ ಪಂತ್ ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ವರ್ಷಾರಂಭದಲ್ಲಿ ಅವರು ಮತ್ತೆ ಕ್ರಿಕೆಟ್ಗೆ ಮರಳುವ ಸಾಧ್ಯತೆ ಇದೆ. ಪಂತ್ ಹೊರತುಪಡಿಸಿ ಉಳಿದ ಯಾವುದೇ ಟೀಮ್ ಇಂಡಿಯಾ ಬ್ಯಾಟರ್ ಕೂಡ ಅಗ್ರ 10ರೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಅಶ್ವಿನ್ ನಂ.1 ಬೌಲರ್
ಆರ್. ಅಶ್ವಿನ್ ಅವರು ಬೌಲಿಂಗ್ ಶ್ರೇಯಾಂಕದಲ್ಲಿ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಲ್ ರೌಂಡರ್ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ(Ravindra Jadeja) ಅಗ್ರ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಬೌಲಿಂಗ್ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿದ್ದಾರೆ.
An entertaining #Ashes Test at Lord’s led to major changes at the top of the @MRFWorldwide ICC Men’s Test Batting Rankings 👀#ICCRankings | Details 👇https://t.co/zI3BcvjVnJ
— ICC (@ICC) July 5, 2023
ಬುಧವಾರ ಬಿಡುಗಡೆಗೊಂಡ ಈ ಶ್ರೇಯಾಂಕ ಪಟ್ಟಿಯಲ್ಲಿ ಅನೇಕ ಮೇಜರ್ ಬದಲಾವಣೆಗಳು ಸಂಭವಿಸಿದೆ. ಆಸೀಸ್ ಆಟಗಾರರು ನೂತನ ಪಟ್ಟಿಯಲ್ಲಿ ಮತ್ತೆ ಪ್ರಾಬಲ್ಯ ಮೆರೆದಿದ್ದಾರೆ. ಸ್ಟೀವನ್ ಸಿತ್, ಮಾರ್ನಸ್ ಲಬುಶೇನ್ ಮತ್ತು ಟ್ರಾವಿಸ್ ಹೆಡ್ ಕ್ರಮವಾಗಿ 2,3 ಮತ್ತು 4ನೇ ಸ್ಥಾನದಲ್ಲಿದ್ದಾರೆ.