Site icon Vistara News

ICC Test Rankings: ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಜೈಸ್ವಾಲ್

yashasvi jaiswal

ದುಬೈ: ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ನೂತನ ಟೆಸ್ಟ್ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 2 ಸ್ಥಾನ ಪ್ರಗತಿ ಸಾಧಿಸಿ ಇದೇ ಮೊದಲ ಬಾರಿಗೆ ಜೀವನಶ್ರೇಷ್ಠ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಅವರು 727 ರೇಟಿಂಗ್​ ಅಂಕದೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ. ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(rohit sharma) ಕೂಡ 2 ಸ್ಥಾನಗಳ ಏರಿಕೆ ಕಂಡು 720 ರೇಟಿಂಗ್​ ಅಂಕ ಪಡೆದು 12ನೇ ಸ್ಥಾನದಲ್ಲಿ ಕಾಣಸಿಕೊಂಡಿದ್ದಾರೆ.

ಪ್ರಸಕ್ತ ಸಾಗುತ್ತಿರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಜೈಸ್ವಾಲ್​ 2 ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಒಟ್ಟಾರೆಯಾಗಿ ಅವರು ಆಡಿರುವ ನಾಲ್ಕು ಟೆಸ್ಟ್​ನಿಂದ 655 ರನ್ ಗಳಿಸಿದ್ದಾರೆ. ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಅಂತಿಮ ಟೆಸ್ಟ್​ನಲ್ಲಿಯೂ ಜೈಸ್ವಾಲ್ ಉತ್ತಮ ರನ್​ ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ

ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್(870)​ ಅವರು ಈ ಹಿಂದಿನಂತೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ರಾಂಚಿ ಟೆಸ್ಟ್​ನಲ್ಲಿ ಶತಕ ಬಾರಿಸಿ 2 ಸ್ಥಾನಗಳ ಪ್ರಗತಿಯೊಂದಿಗೆ ಮೂರನೇ ಸ್ಥಾನಕ್ಕೇರಿದ್ದ ಜೋ ರೂಟ್(Joe Root) ಮತ್ತೆ ಒಂದು ಸ್ಥಾನಗಳ ಏರಿಕೆ ಕಂಡು 2ನೇ ಸ್ಥಾನಕ್ಕೇರಿದ್ದಾರೆ. 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್​ ಕುಸಿತ ಕಂಡು ಮೂರನೇ ಸ್ಥಾನ ಪಡೆದಿದ್ದಾರೆ.

​ವೈಯಕ್ತಿಕ ಕಾರಣ ನೀಡಿ ಟೆಸ್ಟ್​ ಸರಣಿಯಿಂದ ಹಿಂದೆ ಸರಿದ ಟೀಮ್​ ಇಂಡಿಯಾದ ಅನುಭವಿ ಬ್ಯಾಟರ್​ ವಿರಾಟ್ ಕೊಹ್ಲಿ ಕಳೆದ ವಾರ 2 ಸ್ಥಾನಗಳ ಕುಸಿತದೊಂದಿಗೆ 9ನೇ ಸ್ಥಾನ ಪಡೆದಿದ್ದರು. ಆದರೆ, ಇದೀಗ ನೂತನ ಶ್ರೇಯಾಂಕದಲ್ಲಿ 1 ಸ್ಥಾನ ಪ್ರಗತಿಯೊಂದಿಗೆ 8ಕ್ಕೇರಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಸರಿ ಸುಮಾರು ಒಂದು ವರ್ಷಗಳಿಗಿಂತಲೂ ಕ್ರಿಕೆಟ್​ನಿಂದ ದೂರ ಉಳಿದಿರುವ ಟೀಮ್​ ಇಂಡಿಯಾದ ರಿಷಭ್​ ಪಂತ್​ 699 ರೇಟಿಂಗ್​ ಅಂಕದೊಂದಿಗೆ ಬ್ಯಾಟಿಂಗ್​ ಶ್ರೇಯಾಂಕದಲ್ಲಿ 14ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ WPL 2024: ಅತೀ ವೇಗದ ಬೌಲಿಂಗ್‌ ಮೂಲಕ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್‌ನ ಶಬ್ನಿಮ್ ಇಸ್ಮಾಯಿಲ್

ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಕಳೆದ ಬಾರಿಯಂತೆಯೇ ರವಿಂದ್ರ ಜಡೇಜಾ ಅಗ್ರಸ್ಥಾನ, ಆರ್​.ಅಶ್ವಿನ್​ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಬೌಲಿಂಗ್​ ಶ್ರೇಯಾಂಕದಲ್ಲಿ ಜಸ್​ಪ್ರೀತ್​ ಬುಮ್ರಾ 4ನೇ ಟೆಸ್ಟ್​ ಆಡದಿದ್ದರೂ ಕೂಡ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಶ್ವಿನ್​ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್​ದೀಪ್ ಯಾದವ್ 31ನೇ ಸ್ಥಾನಕ್ಕೇರಿದ್ದಾರೆ.​

ಟಾಪ್​ 5 ಬ್ಯಾಟರ್​ಗಳು


1. ಕೇನ್​ ವಿಲಿಯಮ್ಸನ್​- 870 ರೇಟಿಂಗ್ ಅಂಕ

2. ಜೋ ರೂಟ್​-799 ರೇಟಿಂಗ್​ ಅಂಕ

3. ಸ್ಟೀವನ್​ ಸ್ಮಿತ್​-789 ರೇಟಿಂಗ್​ ಅಂಕ

4. ಡ್ಯಾರಿಲ್​ ಮಿಚೆಲ್​-771 ರೇಟಿಂಗ್​ ಅಂಕ

5. ಬಾಬರ್​ ಅಜಂ-768 ರೇಟಿಂಗ್​ ಅಂಕ

ಟಾಪ್​ 5 ಬೌಲರ್​ಗಳು


1. ಜಸ್​ಪ್ರೀತ್​ ಬುಮ್ರಾ-867 ರೇಟಿಂಗ್​ ಅಂಕ

2. ರವಿಚಂದ್ರನ್​ ಅಶ್ವಿನ್​-846 ರೇಟಿಂಗ್​ ಅಂಕ

3. ಕಗಿಸೊ ರಬಾಡ-834 ರೇಟಿಂಗ್​ ಅಂಕ

4. ಜೋಶ್​ ಹ್ಯಾಜಲ್​ವುಡ್​-822 ರೇಟಿಂಗ್​ ಅಂಕ

5. ಪಾಟ್ ಕಮಿನ್ಸ್​-811 ರೇಟಿಂಗ್​ ಅಂಕ

Exit mobile version