ದುಬೈ: 2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ (T20 World Cup) ಟೂರ್ನಿಯನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಆತಿಥ್ಯ ಪಡೆದುಕೊಂಡಿರುವ ಯುಎಸ್ಎಯಲ್ಲಿ ಮೂಲ ಸೌಕರ್ಯದ ಕೊರತೆ ಎದುರಾಗಿರುವ ಕಾರಣ ಅಲ್ಲಿಂದ ಇಂಗ್ಲೆಂಡ್ಗೆ ಸ್ಥಳಾಂತರ ಮಾಡಲು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ನಿರ್ಧಾರ ಮಾಡಿದೆ ಎಂಬುದಾಗಿ ವರದಿಯಾಗಿದೆ.
ಪಂದ್ಯಾವಳಿಗೆ ಇನ್ನು ಕೇವಲ 12 ತಿಂಗಳುಗಳು ಮಾತ್ರ ಉಳಿದಿವೆ. ಆದರೆ, ಟೂರ್ನಿ ಆಯೋಜಿಸಲು ಐಸಿಸಿ ನಿಗದಿಪಡಿಸಿದ ಮೂಲಸೌಕರ್ಯಗಳ ಅಗತ್ಯ ಮಾನದಂಡಗಳನ್ನು ಯುಎಸ್ಎ ಪೂರೈಸಿಲ್ಲ. ವರದಿಗಳ ಪ್ರಕಾರ, ನವೆಂಬರ್ 2021ರ ಐಸಿಸಿ ಪ್ರಕಟಣೆಯ ಪ್ರಕಾರ ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ಗೆ 2030ರ ಟಿ20 ವಿಶ್ವಕಪ್ ಆತಿಥ್ಯ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಅದಕ್ಕಿಂತ ಮೊದಲು ಸಿಗುವ ವಿಂಡೊದಲ್ಲಿ 2024ರ ಆವೃತ್ತಿಯನ್ನು ಇಂಗ್ಲೆಂಡ್ಗೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ವಿಶ್ವದ ಕ್ರಿಕೆಟ್ ದೇಶಗಳಲ್ಲಿ ಜೂನ್ನಲ್ಲಿ ಋತು ಮುಕ್ತಾಯವಾಗುತ್ತದೆ. ಆದರೆ, ಇಂಗ್ಲೆಂಡ್ನಲ್ಲಿ ಬೇಸಿಗೆ ಆರಂಭವಾಗುತ್ತದೆ. ಹೀಗಾಗಿ 2024ರ ಆತಿಥ್ಯವನ್ನು ಇಂಗ್ಲೆಂಡ್ಗೆ ನೀಡುವುದು ಐಸಿಸಿಐ ಉದ್ದೇಶವಾಗಿದೆ. ಅಂತೆಯೇ ಇಂಗ್ಲೆಂಡ್ಗೆ ನೀಡಲು ಉದ್ದೇಶಿಸಿದ್ದ 2030ರ ಆತಿಥ್ಯವನ್ನು ಯುಎಸ್ಎ ಮತ್ತು ವೆಸ್ಟ್ ಇಂಡೀಸ್ಗೆ ನೀಡಲಿದೆ. ಆರು ವರ್ಷಗಳ ಅವಧಿಯಲ್ಲಿ ಮೂಲ ಸೌಕರ್ಯ ಅಭಿವೃದ್ದಿಪಡಿಸಲು ಯುಎಸ್ಎಗೆ ಅವಕಾಶ ಸಿಗಲಿದೆ.
ಇದನ್ನೂ ಓದಿ : ಕೆಲವೇ ದಿನಗಳಲ್ಲಿ ನಿರುದ್ಯೋಗಿಗಳಾಗಲಿದ್ದಾರೆ ಪಾಕಿಸ್ತಾನ ಕ್ರಿಕೆಟಿಗರು!
2024ರ ವಿಶ್ವ ಕಪ್ ಅನಿರೀಕ್ಷಿತ ಪರಿಸ್ಥಿತಿ ಎದುರಿಸುತ್ತಿವೆ. ಯುಎಸ್ಎಯಲ್ಲಿನ ಪ್ರಸ್ತುತ ಮೂಲಸೌಕರ್ಯ ಅಭಿವೃದ್ಧಿ ಜಾಗತಿಕ ಮಟ್ಟದ ಟೂರ್ನಿ ಆಯೋಜಿಸಲು ಪೂರಕವಾಗಿಲ್ಲ. ಹೀಗಾಗಿ ಐಸಿಸಿ 2024 ಮತ್ತು 2030 ರ ಆವೃತ್ತಿಗಳಿಗೆ ಆತಿಥೇಯರನ್ನು ಬದಲಾಯಿಸುವ ಸಾಧ್ಯತೆಗಳಿವೆ. ಈ ನಿರ್ಧಾರದಿಂದಿ ಯುಎಸ್ಎ ಕ್ರಿಕೆಟ್ ಸಂಸ್ಥೆಗೆ 2030ರ ಮೊದಲು ಮೂಲಸೌಕರ್ಯಗಳನ್ನು ಕ್ರಮಬದ್ಧಗೊಳಿಸಲು ಸಮಯಾವಕಾಶ ದೊರೆಯುತ್ತದೆ. ಹೊಸ ಆತಿಥ್ಯವನ್ನು ನೀಡುವುದು ಸಮಂಜಸವಲ್ಲ. ಇಂಗ್ಲೆಂಡ್ಗೆ 2030ರ ವಿಶ್ವಕಪ್ ನೀಡಲಾಗಿರುವ ಕಾರಣ ಮತ್ತು ಜೂನ್-ಜುಲೈನಲ್ಲಿ ಅಲ್ಲಿ ವಿಶ್ವ ಕಪ್ ಆಯೋಜಿಸಲು ಅನುಕೂಲ ಇರುವುದರಿಂದ ಅವರಿಗೇ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿದೆ ಎರಡು ಕ್ರೀಡಾಂಗಣ
ಅಮೆರಿಕದಲ್ಲಿ ಅಂತಾರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಮತ್ತು ಏಕದಿನ ಸ್ಥಾನಮಾನವನ್ನು ಹೊಂದಿರುವ ಎರಡು ಕ್ರೀಡಾಂಗಣಗಳಿವೆ. ಅವುಗಳೆಂದರೆ ಫ್ಲೋರಿಡಾದ ಲಾರ್ಡ್ಹಿಲ್ನಲ್ಲಿರುವ ಸೆಂಟ್ರಲ್ ಬ್ರೋವಾರ್ಡ್ ರೀಜನಲ್ ಪಾರ್ಕ್ ಮತ್ತು ಟೆಕ್ಸಾಸನ್ ಪರ್ಲಾಂಡ್ನಲ್ಲಿರುವ ಮೂಸಾ ಕ್ರೀಡಾಂಗಣ. ಮೂಸಾ ಸ್ಟೇಡಿಯಂ ಕೇವಲ ಅಸೋಸಿಯೇಟ್ ರಾಷ್ಟ್ರಗಳನ್ನು ಒಳಗೊಂಡ 12 ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಮತ್ತೊಂದೆಡೆ, ಸೆಂಟ್ರಲ್ ಬ್ರೋವಾರ್ಡ್ ರೀಜನಲ್ ಪಾರ್ಕ್ ಭಾರತ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾದಂತಹ ದೊಡ್ಡ ರಾಷ್ಟ್ರಗಳನ್ನು ಒಳಗೊಂಡ 14 ಟಿ 20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ.