ಮುಂಬಯಿ: ವಿಶ್ವ ಕಪ್ 2023ರ ವೇಳಾಪಟ್ಟಿ ಬಿಡುಗಡೆಗೆ ಎದುರಾಗಿದ್ದ ಬಿಕ್ಕಟ್ಟು ಕೊನೆಯಾಗಿದೆಯೋ, ಇಲ್ಲವೊ ಗೊತ್ತಿಲ್ಲ. ಆದರೆ ವೇಳಾಪಟ್ಟಿಯನ್ನು ಜೂನ್ 27, ಮಂಗಳವಾರ ಮುಂಬಯಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅನಗತ್ಯವಾಗಿ ಕಾಟ ಕೊಟ್ಟ ಕಾರಣ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಸಮಸ್ಯೆ ಉಂಟಾಗಿತ್ತು. ಈ ಬಿಕ್ಕಟ್ಟು ಈಗ ಬಗೆಹರಿದಂತೆ ಕಾಣುತ್ತದೆ. ಹೀಗಾಗಿ ದೀರ್ಘ ವಿಳಂಬದ ನಂತರ ಮೆಗಾ ಈವೆಂಟ್‌ಗೆ ಕೇವಲ 100 ದಿನಗಳು ಬಾಕಿ ಇರುವಾಗ ವೇಳಾಪಟ್ಟಿ ಹೊರಬೀಳಲಿದೆ. 50 ಓವರ್‌ಗಳ ಕ್ರಿಕೆಟ್‌ನ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ.
ಬಿಸಿಸಿಐ ಮತ್ತು ಪಿಸಿಬಿ ನಡುವೆ ಕೆಲವೊಂದು ವಿಚಾರಗಳ ಬಗ್ಗೆ ಗೊಂದಲವಿತ್ತು. ಭಾರತ ತಂಡ ಪಾಕಿಸ್ತಾನಕ್ಕೆ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದ ಕಾರಣ ಭಾರತದಲ್ಲಿ ಆಯೋಜನೆಗೊಂಡಿರುವ ವಿಶ್ವ ಕಪ್‌ನ ವೇಳಾಪಟ್ಟಿ ಬಿಡುಗಡೆ ಮಾಡಲು ನೆರೆಯ ದೇಶದ ಕ್ರಿಕೆಟ್ ಮಂಡಳಿ ತೊಂದರೆ ಮಾಡುತ್ತಿತ್ತು. ತಾಣಗಳ ಬದಲಾವಣಗೆಗೆ ಕೋರುವುದು, ಆಟಗಾರರ ಪ್ರಯಾಣಕ್ಕೆ ಅನುಮತಿ ಸಿಕ್ಕಿಲ್ಲ ಎಂದೆಲ್ಲ ಹೇಳುವ ಮೂಲಕ ಸಮಸ್ಯೆ ಸೃಷ್ಟಿಸಿತ್ತು. ಈ ಬಿಕ್ಕಟ್ಟು ಶಮನಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಪಾಕಿಸ್ತಾನ ತಂಡ ಕರಡುಪ್ರತಿಗೆ ಒಪ್ಪಿಗೆ ಕೊಡಲೇಬೇಕು ಎಂಬ ನಿರ್ಧಾರದೊಂದಿಗೆ ದಿನಾಂಕವನ್ನು ಪ್ರಕಟಿಸಿದೆ ಐಸಿಸಿ.
ವಿಶ್ವಕಪ್ ವೇಳಾಪಟ್ಟಿಗೆ ನಾವು ಅನುಮೋದನೆ ಅಥವಾ ಅಸಮ್ಮತಿ ನೀಡಲು ಸಾಧ್ಯವಿಲ್ಲ ಎಂದು ನಾವು ಐಸಿಸಿಗೆ ಪತ್ರ ಬರೆದಿದ್ದೇವೆ. ನಮ್ಮ ಸರ್ಕಾರವೇ ನಿರ್ಧರಿಸಬೇಕು, ಭಾರತದ ವಿಷಯಕ್ಕೆ ಬಂದಾಗ ಯಾವಾಗ ಆಡುತ್ತಾರೆ ಎಂಬುದನ್ನು ಅವರ ಸರ್ಕಾರವೇ ನಿರ್ಧರಿಸುತ್ತದೆ. ಅಂತೆಯೇ ಭಾರತಕ್ಕೆ ಪ್ರಯಾಣ ಮಾಡುವ ವಿಚಾರವನ್ನೂ ನಮ್ಮ ಸರಕಾರ ನಿರ್ಧರಿಸುತ್ತದೆ ಎಂಧೂ ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದಿರುವ ನಜಾಮ್ ಸೇಥಿ ಹೇಳಿದ್ದಾರೆ.
ತಮ್ಮ ಸರ್ಕಾರವು ಪಂದ್ಯದ ಸ್ಥಳಗಳಿಗೆ ಹಸಿರು ನಿಶಾನೆ ತೋರಿದ ನಂತರವೇ ತಮ್ಮ ಅನುಮೋದನೆಯನ್ನು ಕಳುಹಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ಆಡುವುದಿಲ್ಲ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಹೀಗಾಗಿ ಪಂದ್ಯವನ್ನು ಚೆನ್ನೈಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಅಷ್ಟೇ ಅಲ್ಲ, ಚೆನ್ನೈನಲ್ಲಿ ಅಫ್ಘಾನಿಸ್ತಾನ ಮತ್ತು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿದೆ. ಚೆನ್ನೈನಲ್ಲಿ ಸ್ಪಿನ್ ಸ್ನೇಹಿ ಟ್ರ್ಯಾಕ್‌ನಲ್ಲಿ ಸ್ಪಿನ್ ಅವಲಂಬಿತ ಆಫ್ಘಾನ್ ತಂಡವನ್ನು ಎದುರಿಸುವುದು ಆರಾಮದಾಯಕವಲ್ಲ ಎಂದು ಪಿಸಿಬಿ ಒತ್ತಿಹೇಳುತ್ತಿದೆ. ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಪಿಸಿಬಿ ಬಯಸಿದೆ. ಆದಾಗ್ಯೂ, ಬಿಸಿಸಿಐ ಈ ವಿಷಯದ ಬಗ್ಗೆ ಗಮನ ಹರಿಸಿಲ್ಲ ಮತ್ತು ವಿನಂತಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ : INDvsWI : ನೋಬಾಲ್‌ಗಳೇ ಮುಳುವಾಯಿತೇ? ವಿಶ್ವ ಕಪ್ ತಂಡದಲ್ಲಿ ಅರ್ಶ್‌ದೀಪ್‌ಗೆ ಚಾನ್ಸ್ ಸಿಗೋದು ಡೌಟ್!
ಈ ವಿಳಂಬಗಳೇ ಐಸಿಸಿ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯನ್ನು ತಡೆಹಿಡಿಯುತ್ತಿವೆ. ಪಿಸಿಬಿ ಅನುಮತಿ ಕಳುಹಿಸಿದ ಕೂಡಲೇ ಐಸಿಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಜೂನ್ 27 ರಂದು ಬಿಡುಗಡೆಗೆ ಹೆಚ್ಚು ಸಂಭವನೀಯ ದಿನಾಂಕವಾಗಿದೆ.