ಮುಂಬಯಿ : ದಿನ ಕಳೆದಂತೆ ಐಸಿಸಿ ವಿಶ್ವಕಪ್ ವೇಳಾಪಟ್ಟಿ (World Cup 2023) ಬಿಡುಗಡೆಗಾಗಿ ಕಾಯುವಿಕೆ ಹೆಚ್ಚಾಗುತ್ತದೆ. ವಿಶ್ವದ ಕ್ರಿಕೆಟ್ ಅಭಿಮಾನಿಗಳ ಕೌತುಕವೂ ಹೆಚ್ಚಾಗುತ್ತಿದೆ. ನಮ್ಮ ನೆಚ್ಚಿನ ತಂಡಗಳ ಪಂದ್ಯ ಯಾವೆಲ್ಲ ದಿನಗಳು ಇವೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅವರು ಕಾಯುತ್ತಿದ್ದಾರೆ. ಆದರೆ, ನಾನಾ ತಾಂತ್ರಿಕ ಕಾರಣಗಳಿಂದ ವೇಳಾಪಟ್ಟಿ ಬಿಡುಗಡೆ ಆಗುತ್ತಿಲ್ಲ. ಇಂದು, ನಾಳೆ ಎನ್ನುತ್ತಲೇ ದಿನ ಮುಂದಕ್ಕೆ ಹೋಗುತ್ತಿದೆ. ಇತ್ತೀಚಿನ ಬೆಳವಣಿಗೆಗಳು ಮತ್ತು ವರದಿಗಳ ಪ್ರಕಾರ, ಐಸಿಸಿ 2023 ರ ವಿಶ್ವಕಪ್ ವೇಳಾಪಟ್ಟಿಯನ್ನು ಜೂನ್ 27 ರಂದು ಬಿಡುಗಡೆ ಮಾಡಲಿದೆ. ಅಂದಿನಿಂದ ವಿಶ್ವಕಪ್ ಆರಂಭವಾಗಲಿರುವ ಅಕ್ಟೋಬರ್5ಕ್ಕೆ ಕೇವಲ 100 ದಿನಗಳು ಬಾಕಿ ಉಳಿದಿವೆ. ಹೀಗಾಗಿ ಅಷ್ಟೊಂದು ಸಮಯವಕಾಶ ಇಟ್ಟುಕೊಂಡು ವೇಳಾಪಟ್ಟಿ ಘೋಷಣೆ ಮಾಡಲು ಸಿದ್ಧತೆ ನಡೆಸಿಕೊಂಡಿದೆ.
ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆಯುತ್ತಿರುವ ಒಳಜಗಳದ ಕಾರಣಕ್ಕೆ ವಿಶ್ವ ಕಪ್ ವೇಳಾಪಟ್ಟಿ ಬಿಡುಗಡೆಗೆ ಸಂಬಂಧಿಸಿದ ನಾಟಕೀಯ ತಿರುವುಗಳು ಅಭಿಮಾನಿಗಳನ್ನು ಕೆರಳಿಸುತ್ತಿದೆ. ಪ್ರತಿ ಸ್ಪರ್ಧಿ ರಾಷ್ಟ್ರಗಳ ಎರಡು ಉನ್ನತ ಕ್ರಿಕೆಟ್ ಸಂಸ್ಥೆಗಳು ಪರಸ್ಪರರ ಜಿದ್ದಿಗೆ ಬಿದ್ದಿವೆ. ಐಸಿಸಿ ಕಳುಹಿಸಿರುವ ಕರಡು ವೇಳಾಪಟ್ಟಿಗೆ ಪಿಸಿಬಿ ಇನ್ನೂ ಅನುಮೋದನೆ ನೀಡಿಲ್ಲ. ಹೀಗಾಗಿ ವೇಳಾಪಟ್ಟಿ ಬಿಡುಗಡೆಗೆ ಅಡಚಣೆ ಉಂಟಾಗುತ್ತಿದೆ. ಬಿಸಿಸಿಐ ಕೂಡ ತನ್ನ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ.
ವಿಶ್ವ ಕಪ್ ವೇಳಾಪಟ್ಟಿಗೆ ನಾವು ನಮ್ಮ ಪಾಡಿಗೆ ಅನುಮೋದನೆ ನೀಡುವುದು ಕಷ್ಟ. ಯಾಕೆಂದರೆ ಅಲ್ಲಿಗೆ ನಮ್ಮ ತಂಡ ಪ್ರಯಾಣ ಮಾಡುವ ವಿಚಾರವನ್ನು ನಮ್ಮ ಸರಕಾರ ತೀರ್ಮಾನ ಮಾಡಬೇಕು ನಾವು ಐಸಿಸಿಗೆ ಪತ್ರ ಬರೆದಿದ್ದೇವೆ ಭಾರತದ ವಿಷಯಕ್ಕೆ ಬಂದಾಗ ನಮ್ಮಲ್ಲಿಗೆ ಬರುವ ವಿಷಯವನ್ನು ಅಲ್ಲಿನ ಸರಕಾರ ನಿರ್ಧಾರ ಮಾಡುತ್ತದೆ ಎಂದಾದರೆ ನಮ್ಮ ಸರಕಾರವೂ ನಿರ್ಧಾರ ಮಾಡಬೇಕಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಜಾಮ್ ಸೇಥಿ ಪತ್ರ ಬರೆದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಲ್ಲಿನ ಸರ್ಕಾರ ಹಸಿರು ನಿಶಾನೆ ತೋರಿದ ಅನುಮೋದನೆಯನ್ನು ಕಳುಹಿಸಬಹುದು ಎಂದು ಸೇಥಿ ಹೇಳಿದ್ದಾರೆ. ಇದೇ ವೇಳ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ಆಡುವುದಿಲ್ಲ ಎಂಬುದನ್ನೂ ಮತ್ತೆ ಮತ್ತೆ ಹೇಳುತ್ತಿದೆ. ಈ ಪಂದ್ಯವನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಎಮದು ಕೇಳುತ್ತಿದೆ.
ಇದನ್ನೂ ಓದಿ : World Cup 2023 : ಚೆನ್ನೈನಲ್ಲೂ ಆಡಲ್ಲ ಅಂತಿದೆ ಪಾಕಿಸ್ತಾನ; ಬಾಬರ್ ಬಳಗದ ಆಕ್ಷೇಪಗಳಿಗೆ ಕೊನೆಯೇ ಇಲ್ಲ!
ಚೆನ್ನೈನಲ್ಲಿ ಅಫ್ಘಾನಿಸ್ತಾನ ಮತ್ತು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಪಿಸಿಬಿ ಆಕ್ಷೇಪ ವ್ಯಕ್ತಪಡಿಸುತ್ತಿದೆ. ನಮ್ಮ ಬೇಡಿಕೆಯನ್ನೂ ಮನ್ನಿಸಿ ಎಂದು ಐಸಿಸಿಗೆ ಪತ್ರ ಬರೆಯುತ್ತಿದೆ. ಚೆನ್ನೈನ ಸ್ಪಿನ್ ಸ್ನೇಹಿ ಟ್ರ್ಯಾಕ್ನಲ್ಲಿ ಭಾರಿ ಸ್ಪಿನ್ನರ್ಗಳು ಇರುವ ಆಫ್ಘಾನ್ ತಂಡವನ್ನು ಎದುರಿಸುವುದು ಸುಲಭವಲ್ಲ ಎಂದು ಪಿಸಿಬಿ ಹೇಳುತ್ತಿದೆ.. ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಪಿಸಿಬಿ ಬಯಸಿದೆ. ಆದಾಗ್ಯೂ, ಬಿಸಿಸಿಐ ಈ ವಿನಂತಿಯನ್ನು ತಿರಸ್ಕರಿಸಿದೆ.
ಈ ಚರ್ಚೆಗಳೇ ಐಸಿಸಿ ವಿಶ್ವಕಪ್ ವೇಳಾಪಟ್ಟಿಯ ಬಿಡುಗಡೆಗೆ ಅಡಚಣೆ ಉಂಟು ಮಾಡುತ್ತಿದೆ. ಪಿಸಿಬಿ ಅನುಮತಿ ಕಳುಹಿಸಿದ ಕೂಡಲೇ, ಐಸಿಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಜೂನ್ 27 ರಂದು ಬಿಡುಗಡೆ ಆಗುವ ಅವಕಾಶ ಹೆಚ್ಚಿದೆ ಎನ್ನಲಾಗಿದೆ.