Site icon Vistara News

INDvsAUS : ಬಿಸಿಸಿಐ ಪ್ರಭಾವಕ್ಕೆ ಬಗ್ಗಿದ ಐಸಿಸಿ, ಇಂದೋರ್​ ಪಿಚ್​​ನ ಕಳಪೆ ರೇಟಿಂಗ್​ ರದ್ದು

ICC under the influence of BCCI canceled the poor rating of Indore pitch

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್​ ತಂಡಗಳ ನಡುವಿನ ಮೂರನೇ ಪಂದ್ಯ ನಡೆದ ಇಂದೋರ್ ಪಿಚ್​ಗೆ ಕಳಪೆ ರೇಟಿಂಗ್ಸ್​ ಕೊಟ್ಟಿರುವ ಐಸಿಸಿ ನಿರ್ಧಾರವನ್ನು ಪ್ರಶ್ನಿಸಿ ಬಿಸಿಸಿಐ ಸಲ್ಲಿಸಿದ್ದ ಮನವಿ ಮಾನ್ಯಗೊಂಡಿದೆ. ಬಿಸಿಸಿಐ ಮೇಲ್ಮನವಿಯನ್ನು ಪುರಸ್ಕರಿಸಿರುವ ಐಸಿಸಿಯ ಕ್ರಿಕೆಟ್​ ಕಮಿಟಿ ಸದಸ್ಯರು ಮ್ಯಾಚ್​ ರೆಫರಿ ಕ್ರಿಸ್​ ಬ್ರಾಡ್ ಅವರ ನಿರ್ಧಾರವನ್ನು ತಳ್ಳಿ ಹಾಕಿದ್ದು, ಪಿಚ್ ಕಳಪೆಯಾಗಿರಲಿಲ್ಲ, ಸರಾಸರಿಗಿಂತ ಕಡಿಮೆಯಾಗಿತ್ತು ಎಂದು ಹೇಳಿ ಕೇವಲ ಒಂದು ಡಿಮೆರಿಟ್​ ಅಂಕ ವಿಧಿಸಿದೆ.

ಬಾರ್ಡರ್​ ಗವಾಸ್ಕರ್ ಟ್ರೋಫಿಯ ಪಂದ್ಯ ನಡೆದ ಇಂದೋರ್ ಪಿಚ್​ನಲ್ಲಿ ಎರಡು ದಿನ ಹಾಗೂ ಮೂರನೇ ದಿನ ಮೊದಲ ಅವಧಿ ಸೇರಿಕೊಂಡು ಒಟ್ಟಾರೆ 31 ವಿಕೆಟ್​ಗಳು ಉರುಳಿದ್ದವು. ಹೀಗಾಗಿ ಮ್ಯಾಚ್​ ರೆಫರಿ ಕ್ರಿಸ್​ ಬ್ರಾಡ್​ ಪಿಚ್ ಕಳಪೆಯಾಗಿತ್ತು ಎಂದು ವರದಿ ನೀಡಿ ಮೂರು ಡಿಮೆರಿಟ್ ಅಂಕಗಳನ್ನು ನೀಡಿದ್ದರು. ಡಿಮರಿಟ್​ ಅಂಕಗಳನ್ನು ಪಡೆಯುವುದು ಪಿಚ್​ ಒಂದರ ದೌರ್ಬಲ್ಯ ಎನಿಸಿಕೊಳ್ಳುತ್ತದೆ. ಯಾಕೆಂದರೆ ಐದು ವರ್ಷಗಳ ಅವಧಿಯಲ್ಲಿ ಆ ಪಿಚ್​ಗೆ ಏನಾದರೂ ಐದು ಡಿಮೆರಿಟ್​ ಅಂಕಗಳು ಲಭಿಸಿದರೆ ಒಂದು ವರ್ಷ ಕಾಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಧ್ಯಪ್ರದೇಶ ಕ್ರಿಕೆಟ್​ ಸಮಿತಿಯು ಐಸಿಸಿ ನಿರ್ಧಾರ ಸರಿಯಲ್ಲ ಎಂದು ಬಿಸಿಸಿಐಗೆ ಸೂಚನೆ ಕೊಟ್ಟಿತ್ತು.

ಮಧ್ಯಪ್ರದೇಶ ಕ್ರಿಕೆಟ್ ಸಮಿತಿಯ ಮನವಿ ಮೇರೆಗೆ ಬಿಸಿಸಿಐ ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಐಸಿಸಿಗೆ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಕೋರಿತ್ತು. ಅದನ್ನು ಕ್ರಿಕೆಟ್​ ಕಮಿಟಿ ಸದಸ್ಯರಾದ ಐಸಿಸಿ ಜನರಲ್​ ಮ್ಯಾನೇಜರ್​ ವಾಸಿಮ್​ ಖಾನ್​, ಕ್ರಿಕೆಟ್​ ಕಮಿಟಿ ಸದಸ್ಯರಾದ ರೋಜರ್​ ಹಾರ್ಪರ್​ ಪರಿಶೀಲನೆ ನಡೆಸಿದ್ದಾರೆ. ಪಂದ್ಯದ ದೃಶ್ಯಗಳನ್ನು ಸಂಪೂರ್ಣವಾಗಿ ವೀಕ್ಷಿಸಿ ಪಿಚ್​ ಅಪಾಯಕಾರಿಯಾಗಿರಲಿಲ್ಲ ಮತ್ತು ಕಳಪೆಯಾಗಿರಲಿಲ್ಲ ಎಂದು ತಿರ್ಮಾನಕ್ಕೆ ಬಂದಿದ್ದಾರೆ. ಪಿಚ್​ ಸರಾಸರಿ ಗುಣಮಟ್ಟಕ್ಕಿಂತ ಕಡಿಮೆ ಇದ್ದ ಕಾರಣ ಕೇವಲ ಒಂದು ಡಿಮೆರಿಟ್​ ಅಂಕಗಳನ್ನು ಮಾತ್ರ ನೀಡಲಾಗಿದೆ.

ಇದನ್ನೂ ಓದಿ : INDvsAUS : ಇಂದೋರ್​ ಪಿಚ್​ಗೆ ಡಿಮೆರಿಟ್​ ಅಂಕ, ಮರುಪರಿಶೀಲನೆ ಅರ್ಜಿ ಸಲ್ಲಿಸಿದ ಬಿಸಿಸಿಐ

ಇಂದೋರ್​ನಲ್ಲಿ ನಡೆದ ಪಿಚ್​ನಲ್ಲಿ ಭಾರತ ತಂಡ ಸೋಲು ಕಂಡಿತ್ತು. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡ ನಂತರದ ಪಂದ್ಯವೂ ಡ್ರಾದಲ್ಲಿ ಕೊನೆಗೊಂಡಿತ್ತು. ಪಂದ್ಯದಲ್ಲಿ ವಿರಾಟ್​ ಕೊಹ್ಲಿ 186 ರನ್​ ಬಾರಿಸಿ ಮಿಂಚಿದ್ದರು. ಇದರ ಫಲವಾಗಿ ಸರಣಿಯು 2-1 ಅಂತರದಿಂದ ಭಾರತ ತಂಡದ ಪಾಲಾಗಿತ್ತು. ಈ ಫಲಿತಾಂಶದ ಹಿನ್ನೆಲೆ ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ಗೆ ಆಯ್ಕೆಯಾಗಿದೆ. ಜೂನ್​ನಲ್ಲಿ ಇಂಗ್ಲೆಂಡ್​ ಕೆನಿಂಗ್ಟನ್​ ಓವಲ್​ನಲ್ಲಿ ಪಂದ್ಯ ನಡೆಯಲಿದೆ.

Exit mobile version