ದುಬೈ: ಐಸಿಸಿ ಪ್ರಕಟಿಸಿರುವ ವರ್ಷದ ಟಿ20 ಮಹಿಳಾ ಕ್ರಿಕೆಟ್ ತಂಡದಲ್ಲಿ (ICC T20 team of the year 2022) ಭಾರತ ಮಹಿಳಾ ತಂಡದ ಆಟಗಾರ್ತಿಯರು ಪಾರಮ್ಯ ಮೆರೆದಿದ್ದಾರೆ. ಸೋಮವಾರ ಪ್ರಕಟವಾದ ಈ ಪಟ್ಟಿಯಲ್ಲಿ ನಾಲ್ಕು ಮಂದಿ ಭಾರತೀಯ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ನ್ಯೂಜಿಲ್ಯಾಂಡ್‌ನ ಸೋಫಿ ಡಿವೈನ್ ಈ ತಂಡಕ್ಕೆ ನಾಯಕಿಯಾಗಿದ್ದಾರೆ.
ಈ ತಂಡದಲ್ಲಿ ಟೀಮ್ ಇಂಡಿಯಾದ ಸ್ಮೃತಿ ಮಂಧಾನಾ, ದೀಪ್ತಿ ಶರ್ಮಾ, ರಿಚಾ ಘೋಷ್ ಮತ್ತು ರೇಣುಕಾ ಸಿಂಗ್ ಸ್ಥಾನ ಪಡೆದ ಪ್ರಮುಖರು. ಮಂಧಾನಾ 2022ರ ಸಾಲಿನ ಕ್ರಿಕೆಟ್ನಲ್ಲಿ 33ರ ಸರಾಸರಿಯಲ್ಲಿ 594 ರನ್ ಗಳಿಸಿದ್ದರು. ದೀಪ್ತಿ ಶರ್ಮಾ ಕಳೆದ ವರ್ಷ ಟಿ20ಯಲ್ಲಿ 29 ವಿಕೆಟ್ ಪಡೆಯುವ ಜತೆಗೆ ಈ ಟಿ20ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ರಿಚಾ ಘೋಷ್ ಅವರು 2022ರಲ್ಲಿ ಆಡಿದ 18 ಪಂದ್ಯಗಳಲ್ಲಿ 13 ಸಿಕ್ಸರ್ಗಳ ಸಹಿತ 259 ರನ್ ಬಾರಿಸಿದ್ದಾರೆ. ಉಳಿದಂತೆ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚುತ್ತಿರುವ ರೇಣುಕಾ ಸಿಂಗ್ ಕಳೆದ ವರ್ಷ 23.95 ಸರಾಸರಿ ಮತ್ತು 6.50 ರ ಎಕಾನಮಿ ದರದಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಸಾಧನೆಗೆ ಇದೀಗ ಐಸಿಸಿ ವರ್ಷದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಐಸಿಸಿ ವರ್ಷದ ಟಿ20 ಮಹಿಳಾ ತಂಡ
ಸ್ಮೃತಿ ಮಂಧಾನಾ (ಭಾರತ), ಬೆತ್ ಮೂನಿ (ಆಸ್ಟ್ರೇಲಿಯಾ), ಸೋಫಿ ಡಿವೈನ್ (ನಾಯಕಿ- ನ್ಯೂಜಿಲ್ಯಾಂಡ್), ಆಶ್ ಗಾರ್ಡ್ನರ್ (ಆಸ್ಟ್ರೇಲಿಯಾ), ತಹಿಲಾ ಮೆಗ್ರಾತ್ (ಆಸ್ಟ್ರೇಲಿಯಾ), ನಿದಾ ದಾರ್ (ಪಾಕಿಸ್ತಾನ), ದೀಪ್ತಿ ಶರ್ಮಾ (ಭಾರತ), ರಿಚಾ ಘೋಷ್ (ವಿಕೆಟ್ ಕೀಪರ್-ಭಾರತ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ಇನೋಕಾ ರಣವೀರಾ (ಶ್ರೀಲಂಕಾ), ರೇಣುಕಾ ಸಿಂಗ್ (ಭಾರತ).
ಇದನ್ನೂ ಓದಿ | ICC Men’s T20I Team of the Year 2022: ಐಸಿಸಿ ವರ್ಷದ ಟಿ20 ತಂಡದಲ್ಲಿ ಸ್ಥಾನ ಪಡೆದ ಟೀಮ್ ಇಂಡಿಯಾದ ಮೂವರು ಕ್ರಿಕೆಟಿಗರು