ನವದೆಹಲಿ: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ (ICC Women’s T20 World Cup) ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಫೆಬ್ರವರಿ 10ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಟೂರ್ನಿಯ ಆತಿಥ್ಯ ವಹಿಸುತ್ತಿದೆ. ಭಾರತ(IND VS PAK) ತಂಡ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ.
ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್-19 ಮಹಿಳೆಯರ ವಿಶ್ವ ಕಪ್ ಗೆದ್ದ ಆತ್ಮವಿಶ್ವಾಸದಲ್ಲಿರುವ ಭಾರತದ ಸೀನಿಯರ್ ಆಟಗಾರ್ತಿಯರೂ ಕಿರಿಯರಂತೆ ವಿಶ್ವ ಕಪ್ ಗೆಲ್ಲುವ ಹುರುಪಿನಲ್ಲಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು ಪ್ರಕಟವಾಗಿದೆ. ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವ ಕಪ್ನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಎಷ್ಟು ತಂಡಗಳು?
ಐಸಿಸಿ ಮಹಿಳೆಯರ ಟಿ20 ವಿಶ್ವ ಕಪ್ ಟೂರ್ನಿಯು ಫೆಬ್ರವರಿ 10ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯವು ಫೆಬ್ರವರಿ 26ರಂದು ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 10 ತಂಡಗಳು ಹೋರಾಟ ನಡೆಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿದೆ.
ಮೂರು ಸ್ಥಳಗಳಲ್ಲಿ ಪಂದ್ಯ ನಡೆಯಲಿದೆ
ದಕ್ಷಿಣ ಆಫ್ರಿಕಾದ ನ್ಯೂಲ್ಯಾಂಡ್ಸ್ ಕ್ರಿಕೆಟ್ ಗ್ರೌಂಡ್ (ಕೇಪ್ ಟೌನ್), ಸೇಂಟ್ ಜಾರ್ಜ್ ಪಾರ್ಕ್ ಕ್ರಿಕೆಟ್ ಗ್ರೌಂಡ್ (ಗ್ಕೆಬರ್ಹಾ) ಮತ್ತು ಬೋಲ್ಯಾಂಡ್ ಪಾರ್ಕ್ (ಪಾರ್ಲ್). ಈ ಮೂರು ಸ್ಥಳಗಳಲ್ಲಿ ಟೂರ್ನಿಯ ಎಲ್ಲ ಪಂದ್ಯಗಳನ್ನು ಆಡಲಾಗುತ್ತದೆ. ಕಳೆದ ಅಂಡರ್-19 ವಿಶ್ವ ಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈ ಮಹತ್ವದ ಟೂರ್ನಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲು ಸಜ್ಜಾಗಿದೆ.
ಟೂರ್ನಿಯ ಸ್ವರೂಪ
ಒಟ್ಟು 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಎಲ್ಲ ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿವೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಭಾರತ ಮಹಿಳಾ ತಂಡವು (India Womens Team) ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಐರ್ಲೆಂಡ್‌ನೊಂದಿಗೆ ಗುಂಪು 2ರಲ್ಲಿದೆ. ಗುಂಪು 1ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಸ್ಥಾನ ಪಡೆದಿದೆ.
ಭಾರತದ ಪಂದ್ಯಗಳ ವೇಳಾಪಟ್ಟಿ
ಭಾರತ ಮಹಿಳೆಯ ತಂಡ ಈಗಾಗಲೇ ಅಭ್ಯಾಸ ಆರಂಭಿಸಿದೆ. ಭಾರತ ಫೆಬ್ರವರಿ 12ರಂದು ಪಾಕ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಬಳಿಕ ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್, ಫೆಬ್ರವರಿ 18 ರಂದು ಇಂಗ್ಲೆಂಡ್, ಫೆಬ್ರವರಿ 20 ರಂದು ಐರ್ಲೆಂಡ್ ವಿರುದ್ಧ ಸೆಣಸಾಡಲಿದೆ.